

ಬೆಂಗಳೂರು: ರಾಜ್ಯದ ಜಿಪಂ ಹಾಗೂ ತಾಪಂಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಅಂತಿಮಗೊಳಿಸಲು ರಾಜ್ಯ ಸರ್ಕಾರ ಮತ್ತೆ ಹೈಕೋರ್ಟ್ ಮುಂದೆ ಕಾಲಾವಕಾಶಕ್ಕೆ ಬೇಡಿಕೆಯಿಟ್ಟಿದೆ.
12 ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು 2023 ಡಿ.19ರಂದು ಹೈಕೋರ್ಟ್‌ಗೆ ಲಿಖಿತ ಭರವಸೆ ಕೊಟ್ಟಿತ್ತು. ನಿಗದಿತ ಅವಧಿಯಲ್ಲಿ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ನಿಗದಿಯಾಗಿತ್ತು.
ಕಲಾಪ ಆರಂಭವಾಗುತ್ತಿದ್ದಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ನ್ಯಾಯಪೀಠದ ಮುಂದೆ ಹಾಜರಾಗಿ, ಜಿಪಂ, ತಾಪಂಗಳಿಗೆ ಮೀಸಲಾತಿ ಅಂತಿಮಗೊಳಿಸಲು ಜನವರಿ ಮೊದಲ ವಾರದವರೆಗೆ ಸಮಯ ಬೇಕು. ಕೊಡಗು ಜಿಲ್ಲೆಯ ಕ್ಷೇತ್ರ ಮರು ವಿಂಗಡಣೆ ವಿಳಂಬವಾಗಿದ್ದರಿಂದ ಎಲ್ಲ ಜಿಲ್ಲೆಗಳ ಮೀಸಲಾತಿ ನಿಗದಿಗೆ ತಡವಾಗಿದೆ.
ಮೀಸಲಾತಿ ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಲಾಗಿದೆ. ಶೀಘ್ರದಲ್ಲೇ ಕರಡು ಮೀಸಲಾತಿ ಹೊರಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗುವುದು. ಬಳಿಕ ಮೀಸಲಾತಿ ಪಟ್ಟಿಯನ್ನು ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳಿಸಿಕೊಡಲಾಗುವುದು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ. ಕಾಲಾವಕಾಶ ನೀಡುವ ಬಗ್ಗೆ ಮುಂದಿನ ವಿಚಾರಣೆಯಂದು ನಿರ್ಧರಿಸಲಾಗುವುದು ಎಂದು ಹೇಳಿತು.