

ಧಾತುಗಳಲ್ಲಿ ಚಿನ್ನವೇ ಪವಿತ್ರ. ಪ್ಲಾಟಿನಂ, ವಜ್ರಗಳು ಚಿನ್ನಕ್ಕಿಂತ ದುಬಾರಿಯಾದರೂ ಬಂಗಾರಕ್ಕೆ ಇರುವ ಪೂಜ್ಯತೆ ಕಡಿಮೆ ಆಗಿಲ್ಲ. ಅದರಲ್ಲೂ ದೇವಾಲಯಗಳು ಹಾಗೂ ಮನೆಗಳಲ್ಲಿ ಪೂಜೆ-ಪುನಸ್ಕಾರಕ್ಕೆ ಇಡುವುದು ಬಂಗಾರವನ್ನೇ. ದೇವಾಲಯದಲ್ಲಿ ಚಿನ್ನ ಬಳಸುವುದಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಬೆರಳೆಣಿಕೆಯಷ್ಟೇ ಚಿನ್ನದ ದೇವಾಲಯಗಳಿವೆ. ಆದರೆ ಚಿನ್ನದ ಒಡವೆ, ಕವಚ, ತಗಡುಗಳಿಂದ ಅಲಂಕರಿಸುವ ಸಂಪ್ರದಾಯವಿದೆ.
ಚಿದಂಬರ ದೇವಾಲಯ: ನಟರಾಜನ ವಿಗ್ರಹದ ಕಾಲಿನ ಹೆಬ್ಬೆರಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಮಧ್ಯಬಿಂದು ಎಂದು ತಮಿಳುನಾಡಿನ ಹೆಸರಾಂತ ವಿದ್ವಾಂಸ ತಿರುಮಲ ಅವರು ತಿರುಮಲಂ ಗ್ರಂಥದಲ್ಲಿ ವಿವರಿಸಿದ್ದಾರೆ. ವಿಜ್ಞಾನಿಗಳ ಅಭಿಮತವೂ ಇದೇ ಆಗಿದೆ. ನಟರಾಜನ ವಿಗ್ರಹವು ಸ್ಪಟಿಕಲಿಂಗದ ರೂಪದಲ್ಲಿರುವ ಚಂದ್ರಮೌಳೇಶ್ವರನದು. ಮನುಷ್ಯನಿಗೆ ಇರುವುದು ನವರಂಧ್ರಗಳು. ಅಂದರೆ ಒಂಬತ್ತು ತೂತುಗಳಿರುವ ಕೊಡ ಆತ. ಈ ದೇವಾಲಯಕ್ಕೆ ಒಂಬತ್ತು ಬಾಗಿಲು. ಪುರಾಣದ ಪ್ರಕಾರ ಮನುಷ್ಯ ಇಪ್ಪತ್ತೊಂದು ಸಾವಿರದ ಆರುನೂರು ಬಾರಿ ಶ್ವಾಸೋಚ್ಚಾಸವನ್ನು ಮಾಡುವನು. ದೇವಾಲಯದ ಮೇಲ್ಭಾಗದಲ್ಲಿ ಇಪ್ಪತ್ತೊಂದು ಸಾವಿರದ ಆರುನೂರು ಚಿನ್ನದ ತಗಡನ್ನು ಅಳವಡಿಸಲಾಗಿದೆ. ಮನುಷ್ಯನಿಗೆ ಎಪ್ಪತ್ತೆರಡು ಸಾವಿರ ನಾಡಿಗಳಿವೆ. ಚಿನ್ನದ ತಗಡನ್ನು ಅಳವಡಿಸಲು ಉಪಯೋಗಿಸಿದ ಮೊಳೆಗಳು ಎಪ್ಪತ್ತೆರಡು ಸಾವಿರ. ಈ ದೇವಾಲಯದ ಎಡಭಾಗದಲ್ಲಿರುವ ಪೊನ್ನಂಬಳಂ ಮನುಷ್ಯನ ಹೃದಯಸ್ಥಾನ. ಪಂಚಾಕ್ಷರಿ ಪಡಿಯನ್ನು ಹೊತ್ತು ಅಲ್ಲಿಗೆ ಹೋಗಬಹುದು.
ಮಂಟಪದ ಪಕ್ಕದಲ್ಲಿರುವ ಹದಿನೆಂಟು ಕಂಬಗಳು ಹದಿನೆಂಟು ಪುರಾಣಗಳ ಗುರುತು. ನಾಲ್ಕು ಕಂಬಗಳು ನಾಲ್ಕು ದಿಕ್ಕುಗಳಲ್ಲಿವೆ. ಇವುಗಳಲ್ಲಿ ಭರತಮುನಿಯು ಉಲ್ಲೇಖಿಸಿದ ಭರತನಾಟ್ಯದ ಭಂಗಿಗಳನ್ನು ಕಾಣಬಹುದು. ಶಿವನೇ ನಟರಾಜಸ್ವಾಮಿ. ಇಲ್ಲಿ ಜಗದ್ವಿಖ್ಯಾತ ಸಂಗೀತ-ನೃತ್ಯ ಕಾರ್ಯಕ್ರಮಗಳು ನಡೆಯುತ್ತವೆ.
ಸಿದ್ಧಿವಿನಾಯಕ ದೇವಾಲಯ: ದಕ್ಷಿಣ ಮುಂಬೈನ ಪ್ರಭಾದೇವಿಯ ಪ್ರಮುಖ ಧಾರ್ವಿುಕ ಆಕರ್ಷಣೆ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯ. ಚಿನ್ನದಿಂದ ಮಾಡಿದ ಛಾವಣಿಯ ಕೆಳಗೆ ಗಣಪತಿ ಮೂರ್ತಿ ಇದೆ. ಈಗ 14 ಕೋಟಿ ಮೌಲ್ಯದ 35 ಕೆ.ಜಿ. ಚಿನ್ನದಿಂದ ಮಂದಿರ ಸ್ವರ್ಣಲೇಪಿತವಾಗಿದೆ. ಮರದ ಬಾಗಿಲನ್ನು ಚಿನ್ನದ ಎಲೆಗಳಿಂದ ಮುಚ್ಚಲಾಗಿದೆ.
ಅಯ್ಯಪ್ಪಸ್ವಾಮಿ ದೇವಾಲಯ: ಕೇರಳದ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಯ ದ್ವಾರಪಾಲಕರು ಹಾಗೂ ಗೋಡೆಗಳಿಗೆ ಭಕ್ತರು ಚಿನ್ನದ ಲೇಪನ ಮಾಡಿದ್ದಾರೆ.
ಮೀನಾಕ್ಷಿ ದೇವಾಲಯ: ತಮಿಳುನಾಡಿನಲ್ಲಿರುವ ಮೀನಾಕ್ಷಿ ಮಂದಿರ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಈ ದೇವಾಲಯದಲ್ಲಿ ಎರಡು ಚಿನ್ನದ ವಿಮಾನಗಳಿವೆ. ಶಿವನ ಅವತಾರವಾದ ಸುಂದರೇಶ್ವರನ ಪತ್ನಿ ಮೀನಾಕ್ಷಿಗಾಗಿ ಈ ದೇವಾಲಯ ಮುಡಿಪಾಗಿದೆ.
ಕಾಶಿ ವಿಶ್ವನಾಥ ದೇವಾಲಯ: ವಿಶ್ವನಾಥ ಹಾಗೂ ಗಂಗೆಯ ದರ್ಶನಕ್ಕಾಗಿ ದೇಶ-ವಿದೇಶಗಳಿಂದ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಮೋಕ್ಷಪ್ರದವಾದ ಸ್ಥಳ. ಈ ದೇವಾಲಯದಲ್ಲಿ ಮೂರು ಪ್ರಮುಖ ಬುರುಜುಗಳಿದ್ದು ಇದರ ಎರಡು ಬುರುಜಗಳನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ.
ಕೊಲ್ಲೂರು ಶ್ರೀ ಮೂಕಾಂಬಿಕೆ: ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದ ಸೌಪರ್ಣಿಕಾ ನದಿಯ ದಡದಲ್ಲಿ ಮೂಕಾಂಬಿಕೆ ದೇವಾಲಯವಿದೆ. ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಶ್ರೀಚಕ್ರದ ಮೇಲೆ ದೇವಿಯ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಿದರು. ದೇವಿಯ ನಾನಾ ಬಗೆಯ ಆಭರಣಗಳ ಪೈಕಿ ಪಚ್ಚೆಯಲ್ಲಿರುವ ಆಭರಣವು ಅತ್ಯಮೂಲ್ಯ ಎನಿಸಿದೆ. ಪಚ್ಚೆಯು ಜ್ಞಾನವನ್ನು ಪ್ರತಿನಿಧಿಸುತ್ತದೆ. ಬಂಗಾರದಲ್ಲಿ ಮಾಡಿರುವಂಥ, ಉತ್ಸವದಲ್ಲಿ ಬಳಸುವ ಎರಡು ಉತ್ಸವಮೂರ್ತಿಗಳಿವೆ. ಮೂಕಾಂಬಿಕಾ ದೇವತೆಯ ಮುಖವಾಡವು ಪೂರ್ಣ ಬಂಗಾರದಿಂದ ಮಾಡಲ್ಪಟ್ಟಿದೆ. ವಿವಿಧ ಸ್ಥಳಗಳಿಂದ ಸಾವಿರಾರು ಮಂದಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೇರಳಿಯರಿಗೆ ಪ್ರಧಾನ ದೇವತೆ, ಕುಲದೇವರಿದ್ದಂತೆ. ಅವರು ನೃತ್ಯ-ಸಂಗೀತವನ್ನು ಪ್ರಾರಂಭಿಸುವುದು ಇಲ್ಲಿಯೇ. ಶ್ರೇಯಸ್ಸಿಗಾಗಿಯೇ ಕೊಲ್ಲೂರಿಗೆ ಬರುವರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಂ.ಜಿ.ಆರ್. ಒಂದು ಬಂಗಾರ ಕತ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅದು ಒಂದು ಕೆ.ಜಿ.ಯಷ್ಟು ತೂಗುತ್ತದೆ ಹಾಗೂ 2.5 ಅಡಿ ಉದ್ದವಿದೆ. ಒಂಬತ್ತು ದಿನ ಅವಧಿಯ ಸಂಗೀತ ಉತ್ಸವವು ಪ್ರತಿ ವರ್ಷ ನಡೆಯುವುದು. ಪ್ರಸಿದ್ಧ ಗಾಯಕ ಯೇಸುದಾಸ್ ತಮ್ಮ ಹುಟ್ಟುಹಬ್ಬವನ್ನು ಇಲ್ಲಿಯೇ ಮೂಕಾಂಬಿಕೆಯ ಗೀತೆಗಳನ್ನು ಹಾಡುವುದರ ಮೂಲಕ ಆಚರಿಸಿಕೊಳ್ಳುವರು.
(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)
(ಪ್ರತಿಕ್ರಿಯಿಸಿ: anantvaidyayellapur@gmail.com)
(ನಾಳೆ, ಮಹಾಭಾರತವನ್ನು ಕುರಿತ ಪರಿಚಯಾತ್ಮಕ ಅಂಕಣ ‘ಪರಂಪರೆ’)