ಬಂಗಾರದ ಮನುಷ್ಯ ಶರವಣ ಸಾಧನೆ ಪಯಣ: ಕಷ್ಟದಲ್ಲಿರುವವರಿಗೆ ಮರುಗುವ ಕರುಣಾಮಯಿ | ಸಾಯಿ ಗೋಲ್ಡ್ ಪ್ಯಾಲೇಸ್​ನ ರೂವಾರಿ

-6871cf4da4736
Published on

ಕಡು ಬಡತನದಲ್ಲೇ ಬಾಲ್ಯ ಕಳೆದು, ಚಿನ್ನದ ಗಟ್ಟಿಯನ್ನು ಒಡವೆಯಾಗಿ ವಿನ್ಯಾಸಗೊಳಿಸುವಂತೆ ತಮ್ಮ ಜೀವನವನ್ನು ‘ಡಿಸೈನ್’ ಮಾಡಿಕೊಂಡವರು ಛಲದಂಕಮಲ್ಲ ವಿಧಾನಪರಿಷತ್ ಸದಸ್ಯರೂ ಆಗಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಡಾ. ಟಿ.ಎ. ಶರವಣ. ಬಡವರು, ಅಸಹಾಯಕರಿಗೆ ‘ಕೊಡುಗೈ ದಾನಿ’, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ‘ಬಂಗಾರದ ಮನುಷ್ಯ’, ಸಮುದಾಯದ ಬಂಧುಗಳಿಗೆ ಚಿನ್ನಾಭರಣದಷ್ಟೇ ‘ಮೌಲ್ಯಯುತ ಸಂಪತ್ತು’, ಕಷ್ಟದಲ್ಲಿರುವವರಿಗೆ ‘ಕರುಣಾಮಯಿ’. ಕಳೆದ 25 ವರ್ಷಗಳಿಂದಲೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವ ಅವರ ಕೊಡುಗೆ ಯನ್ನು ಪರಿಗಣಿಸಿ ‘ವಿಜಯವಾಣಿ’ ಕೊಡಮಾಡುವ ಪ್ರತಿಷ್ಠಿತ ‘ವಿಜಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೆಂಗಳೂರು: ಅಮೃತ ಕಂಠೇಶಯ್ಯ ಮತ್ತು ಧನಲಕ್ಷ್ಮೀ ದಂಪತಿ ಪುತ್ರನಾಗಿ 1971ರ ಆ.25ರಂದು ಬೆಂಗಳೂರಿನಲ್ಲಿ ಜನಿಸಿದ ಟಿ.ಎ. ಶರವಣ, ಕಡುಬಡತನ ದಲ್ಲಿಯೇ ಬೆಳೆದು ಬಂದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು, ಪಾಲಕರು ಆರ್ಥಿಕವಾಗಿ ಹಿಂದುಳಿದಿದ್ದರಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಜುವೆಲ್ಲರಿ ಅಂಗಡಿಯಲ್ಲಿ 1987ರಲ್ಲಿ ಸೇಲ್ಸ್​ಮನ್ ಆಗಿ ಕೆಲಸಕ್ಕೆ ಸೇರಿಕೊಂಡರು. ಚಿನ್ನ, ಬೆಳ್ಳಿ ಮತ್ತು ವಜ್ರದ ಬಗ್ಗೆ ಹಂತಹಂತವಾಗಿ ತಿಳಿಯುತ್ತ ಹೋದರು.

ಮೂರು ಹೊತ್ತು ಊಟಕ್ಕೂ ಕಷ್ಟವಿದ್ದ ಕಾಲವದು. ಒಂದೆಡೆ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಕುಟುಂಬದ ನಿರ್ವಹಣೆ ಮತ್ತು ಸಹೋದರಿಯರಿಗೆ ಮದುವೆ ಮಾಡಿ ಕಳುಹಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಅದನ್ನು ನಿಭಾಯಿಸಲು ಹತ್ತಾರು ರೀತಿ ಕಷ್ಟಪಟ್ಟಿದ್ದೇನೆ. ಶಿಸ್ತಿನ ಜೀವನ ರೂಪಿಸಿಕೊಂಡು ಇಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕನಾಗಿದ್ದೇನೆಂದು ಖುಷಿಯಿಂದ ಹೇಳಿಕೊಳುತ್ತಾರೆ ಶರವಣ.

300 ಜನರಿಗೆ ಕೆಲಸ: ಸಾಯಿ ಗೋಲ್ಡ್ ಪ್ಯಾಲೇಸ್, ಬೆಂಗಳೂರಿನಲ್ಲಿ 6 ಶಾಖೆಗಳನ್ನು ಹೊಂದಿದೆ. ಒಟ್ಟು 300 ಜನರಿಗೆ ಕೆಲಸ ನೀಡಿದ್ದೇನೆ. ಸಂಸ್ಥೆಯಲ್ಲಿ ದುಡಿಯುವವರನ್ನು ಕೆಲಸಗಾರರು ಮಾತ್ರವಲ್ಲ, ಅವರನ್ನು ಕುಟುಂಬದ ಸದಸ್ಯರ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಇಂದು ರಾಜ್ಯದಲ್ಲಿಯೇ ಸಾಯಿ ಗೋಲ್ಡ್ ಮನೆ ಮಾತಾಗಿದೆ. ನಾನು ಹಾಜರಿರಲಿ, ಇಲ್ಲದಿರಲಿ ಗ್ರಾಹಕರಿಗೆ ಏನು ಬೇಕು, ಯಾವ ಡಿಸೈನ್ ಬೇಕು, ಟ್ರೆಂಡ್ ಏನಿದೆ, ಹೊಸತನ ಅಳವಡಿಕೆ ಸೇರಿ ಹತ್ತಾರು ಆಲೋಚನೆ ಮತ್ತು ಕ್ರಿಯಾಶೀಲತೆಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶರವಣ ಹೇಳಿಕೊಳ್ಳುತ್ತಾರೆ.

ನನ್ನ ಏಳಿಗೆಗೆ ಗ್ರಾಹಕ, ಬಾಬಾ, ಸಿಬ್ಬಂದಿ ಕಾರಣ: 1020 ಅಡಿಯ ಸಾಧಾರಣ ಅಂಗಡಿಯಲ್ಲಿ ಆರಂಭಿಸಿದ ಉದ್ಯಮ ಇಂದು ದೊಡ್ಡ ಮಟ್ಟದಲ್ಲಿ ಸಾಯಿ ಗೋಲ್ಡ್ ಪ್ಯಾಲೇಸ್ ಆಗಿ ಬೆಳೆದಿದೆ. ಇದೆಲ್ಲ ನನ್ನ ಆರಾಧ್ಯದೈವ ಶಿರಡಿ ಶ್ರೀಸಾಯಿ ಬಾಬಾ ಆಶೀರ್ವಾದದಿಂದ ಸಾಧ್ಯವಾಯಿತು. ಜತೆಗೆ ಗ್ರಾಹಕರು ನನ್ನ ಕಂಪನಿ ಬ್ರಾ್ಯಂಡ್ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಒಡವೆಗಳನ್ನು ಖರೀದಿ ಮಾಡುತ್ತಿದ್ದಾರೆ. ಅದಕ್ಕಾಗಿ ಗ್ರಾಹಕರನ್ನು ದೇವರಂತೆ ನೋಡುತ್ತಿದ್ದೇನೆ. ನನ್ನ ಸಿಬ್ಬಂದಿ ವರ್ಗ ಕೂಡ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎನ್ನುತ್ತಾರೆ ಶರವಣ.

ಗ್ರಾಹಕರಿಗೆ ಜಾಗೃತಿ ಕಾರ್ಯಕ್ರಮ

ಎಲ್ಲಿಯತನಕ ಯಾಮಾರುವವರು ಇರುತ್ತಾರೋ ಅಲ್ಲಿಯತನಕ ಯಾಮಾರಿಸುವವರು ಕೂಡ ಇರುತ್ತಾರೆ. ಇದಕ್ಕಾಗಿ ಕರ್ನಾಟಕ ರಾಜ್ಯ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷನಾಗಿ ಗ್ರಾಹಕರಿಗೆ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗಿ ಹಣ ಕೂಡಿಟ್ಟು ಚಿನ್ನ ಖರೀದಿ ಮಾಡಬೇಕೆಂಬ ಕನಸು ಹೊತ್ತು ನಮ್ಮ ಅಂಗಡಿಗೆ ಬರುತ್ತಾರೆ. ಅಂತಹ ಗ್ರಾಹಕರಿಗೆ ಅನ್ಯಾಯ ಮಾಡಬಾರದು ಎಂಬುದು ನನ್ನ ಉದ್ದೇಶ ಎನ್ನುತ್ತಾರೆ ಶರವಣ.

ಹಳದಿ ದೇವತೆ ಎಲ್ಲರ ಮನೆಯಲ್ಲಿಯೂ ಇರಲಿ

ಚಿನ್ನ, ಬೆಳ್ಳಿ ಮತ್ತು ವಜ್ರವು ಹಳದಿ ದೇವತೆಯಾಗಿದೆ. ಅದನ್ನು ಲಕ್ಷಿ್ಮೕ ರೂಪದಲ್ಲಿ ನೋಡುತ್ತೇವೆ. ಲಕ್ಷ್ಮೀಯನ್ನು ತುಂಬ ಪಾವಿತ್ರ್ಯತೆಯಿಂದ ಬರಮಾಡಿಕೊಳ್ಳುತ್ತೇವೆ. ಲಕ್ಷಿ್ಮೕಯು ಸತತವಾಗಿ ಎಲ್ಲರ ಮನೆಯಲ್ಲಿಯೂ ನಿಲ್ಲಬೇಕು ಎಂದು ಶರವಣ ಆಶಿಸುತ್ತಾರೆ.

ಸಾಯಿ ಮಂದಿರಕ್ಕೆ ಪ್ರವೇಶಿಸಿದ ಅನುಭವ

ಗ್ರಾಹಕರು ಸಾಯಿ ಗೋಲ್ಡ್ ಪ್ಯಾಲೇಸ್​ಗೆ ಭೇಟಿ ನೀಡಿದರೆ ಸಾಯಿಮಂದಿರಕ್ಕೆ ಭೇಟಿ ನೀಡಿದ ಭಾಸವಾಗಲಿದೆ. ಆದ್ದರಿಂದ ಕಾಣಿಕೆಯಾಗಿ ನೀಡಲು ಬೆಳ್ಳಿ ಒಡವೆಯನ್ನು ಖರೀದಿ ಮಾಡಬೇಕೆಂದು ಬಂದವರು ನನ್ನ ಮೇಲಿನ ನಂಬಿಕೆಯಿಂದ ವಜ್ರಾಭರಣ ಕೊಂಡೊಯ್ಯುತ್ತಾರೆ. ಅವರ ಕನಸಿನ ಆಭರಣವನ್ನು ಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಗುಣಮಟ್ಟ, ವಿನ್ಯಾಸ, ಬೆಲೆಯಲ್ಲಿ ಗ್ರಾಹಕಸ್ನೇಹಿಯಾಗಿದ್ದೇವೆ. ಅಪ್ಪಟ ಹಾಲ್​ವಾರ್ಕ್ ಚಿನ್ನವನ್ನೇ ನೀಡುತ್ತಿದ್ದೇವೆ. ಚಿನ್ನದ ಗುಣಮಟ್ಟ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಒಂದೂವರೆ ವರ್ಷದ ಹಿಂದೆ ಹಾಲ್​ವಾರ್ಕ್ ಕಡ್ಡಾಯಗೊಳಿಸಿದೆ. ನಾನು 15 ವರ್ಷಗಳ ಹಿಂದೆಯೇ ಇದನ್ನು ಮಾಡಿದ್ದೆ ಎಂಬುದು ಶರವಣ ಅವರ ಹೆಮ್ಮೆಯ ನುಡಿ.

ಆರ್ಯವೈಶ್ಯ ಅಭಿವೃದ್ಧಿ ನಿಗಮ

ನಮ್ಮ ಸಮುದಾಯದಲ್ಲಿಯೂ ಸಾಕಷ್ಟು ಬಡ ಜನರಿದ್ದಾರೆ. ರಾಜ್ಯ ಪ್ರವಾಸದ ಸಮಯದಲ್ಲಿ ತೀರಾ ಹತ್ತಿರದಿಂದ ನೋಡಿದ್ದೇನೆ. ಕಿರಾಣಿ ಅಂಗಡಿ, ದೇವಸ್ಥಾನ, ಪಾನಿಪುರಿ ಅಂಗಡಿ ಸೇರಿ ಹಲವು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಸಮಾಜಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಾನು ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿಸಿದ್ದೆ. ಅಲ್ಪಸಂಖ್ಯಾತರಿರುವ ನಮಗೆ ಆರ್ಯವೈಶ್ಯ ಅಭಿವೃದ್ಧಿ ನಿಗಮವನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಘೋಷಿಸಿದ್ದರು. ಈ ಕೆಲಸ ಶರವಣ ಅವರಿಗೆ ಸಾಕಷ್ಟು ಖುಷಿ ಕೊಟ್ಟಿದೆಯಂತೆ.

ಏನೆಲ್ಲ ಸಾಮಾಜಿಕ ಸೇವೆ?

ಜುವೆಲ್ಲರಿ ಉದ್ಯಮದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಬಡ ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಶುಲ್ಕ, ಔಷಧ ಖರೀದಿಸಲು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಶರವಣ ಚಾರಿಟಬಲ್ ಟ್ರಸ್ಟ್ ಮತ್ತು ಸಾಯಿ ಚಾರಿಟಬಲ್ ಟ್ರಸ್ಟ್ ಮೂಲಕ ಸೇವೆ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಶಿರಡಿಯಲ್ಲಿ ಬಾಬಾ ದರ್ಶನ ಕೂಡ ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಶಿರಡಿಗೆ ಗುರುವಾರ 3 ಬಸ್ಸುಗಳನ್ನು ಕಳುಹಿಸಿ ದರ್ಶನ ಪಡೆಯುವಂತೆ ಮಾಡುವ ಕೆಲಸ ಮಾಡುತ್ತಿದ್ದೇನೆ. ವೈಕುಂಠ ಏಕಾದಶಿಗೆ ಲಕ್ಷ ಲಡ್ಡು ವಿತರಣೆ ಮತ್ತು ಅಪ್ಪಾಜಿ ಕ್ಯಾಂಟೀನ್​ನಲ್ಲಿ ಪ್ರತಿ ದಿನ 3,500 ಜನರಿಗೆ ಊಟ ವಿತರಣೆ ಮಾಡಲಾಗುತ್ತಿದೆ ಎಂದು ಶರವಣ ಮಾಹಿತಿ ನೀಡುತ್ತಾರೆ.

1998ರಲ್ಲಿ ರಾಜಕೀಯ ಪ್ರವೇಶ

ಅನೇಕ ಸಮಾಜ ಸೇವೆಗಳನ್ನು ಪ್ರತಿ ಹಂತದಲ್ಲಿ ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಸಮಯದಲ್ಲಿ ನಾನೇಕೆ ರಾಜಕೀಯದಲ್ಲಿಯೂ ಸೇವೆ ಸಲ್ಲಿಸಬಾರದು ಎಂದು ಆಲೋಚಿಸಿ, 1998ರಲ್ಲಿ ಜೆಡಿಎಸ್ ಸೇರ್ಪಡೆಗೊಂಡೆ. ಯುವ ಜನತಾದಳದ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಕಾರ್ಯ ಮಾಡಿದ್ದೇನೆ. ಅದರ ಪ್ರತಿಫಲವಾಗಿ ಪಕ್ಷವು 2014ರಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿತು. 2022ರಿಂದ 2ನೇ ಬಾರಿಗೆ ಎಂಎಲ್​ಸಿ ಮಾಡಿದೆ. ಪರಿಷತ್ತಿನ ಜೆಡಿಎಸ್ ಉಪ ನಾಯಕನಾಗಿಯೂ ಜವಾಬ್ದಾರಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶರವಣ.

ಸಚಿವನಾಗುವಾಸೆ...

ಪಕ್ಷದಲ್ಲಿ ನನ್ನ ಬದ್ಧತೆ, ಸಂಘಟನೆ ಮತ್ತು ಕಾರ್ಯವೈಖರಿ ನೋಡಿ ಎಂಎಲ್​ಸಿ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವು ಅಧಿಕಾರಕ್ಕೆ ಬಂದತಂಹ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಅವಕಾಶ ಮಾಡಿಕೊಟ್ಟರೆ ಸಚಿವನಾಗುವ ಬಯಕೆ ಹೊಂದಿದ್ದೇನೆ. 2028ರಲ್ಲಿ ಎಂಎಲ್​ಎ ಕೂಡ ಆಗಬೇಕೆಂಬ ಆಲೋಚನೆ ಹೊಂದಿದ್ದೇನೆ. ಜೆಡಿಎಸ್​ಗೆ ಸ್ವಂತ ಶಕ್ತಿ ಮೇಲೆ ಅಧಿಕಾರ ಸಿಗಬೇಕು. ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಆಸೆ ಎನ್ನುತ್ತಾರೆ ಶರವಣ.

ದೇವೇಗೌಡರು ಸರಳತೆಗೆ ಮಾದರಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಂದಿಗೂ ಬಿಳಿ ಪಂಚೆ ಮತ್ತು ಅಂಗಿಯನ್ನೇ ತೊಡುತ್ತಾರೆ. ದೂರದಿಂದ ನೋಡಿದವರು ಏನೋ ತಿಳಿದಿದ್ದಾರೆ. ಆದರೆ, ಗೌಡರು ಚುನಾವಣೆಗಳನ್ನು ನಡೆಸಲು ಇಂದಿಗೂ ಸಾಲ ಮಾಡುತ್ತಾರೆ. ಪ್ರಧಾನಿ, ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದರೂ ಅವರ ಬಳಿ ಕೋಟ್ಯಂತರ ರೂ. ದುಡ್ಡಿಲ್ಲ. ಆಸ್ತಿಗಳಿಲ್ಲ. ಇಂದಿಗೂ ಸರಳ, ಸೌಜನ್ಯ ಮತ್ತು ಸೌಮ್ಯತೆಯಿಂದ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಈ ಕೆಲಸ ನನಗೆ ಮಾದರಿ. ಜೀವನದಲ್ಲಿ ನಾವು ಮಾಡುವ ಕೆಲಸವೊಂದೇ ಶಾಶ್ವತವೆಂದು ತಿಳಿದು ಅದನ್ನು ರೂಢಿಸಿಕೊಂಡಿದ್ದೇನೆ. ಅವರನ್ನು ಗುರುವಾಗಿ, ದೇವರಾಗಿ ಪೂಜಿಸುತ್ತೇನೆ ಎಂದು ಭಕ್ತಿಭಾವದಿಂದ ಹೇಳುತ್ತಾರೆ ಶರವಣ.

ಮಗಳನ್ನು ರಾಜಕೀಯಕ್ಕೆ ತರುವ ಉದ್ದೇಶ

ರಾಜಕೀಯದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ತಂದೆ-ತಾಯಿ ಆಶೀರ್ವಾದವಿದೆ. ಪತ್ನಿ ಶೀಲಾದೇವಿ ಕಷ್ಟ-ಸುಖದಲ್ಲಿ ಹೆಗಲಿಗೆ ಹೆಗಲು ನೀಡಿದ್ದಾರೆ. ಹೆಣ್ಣುಮಕ್ಕಳಾದ ಶ್ರೇಯಾ, ಶ್ರುತಿ ಮತ್ತು ಮಗ ಸಾಯಿ ಪೃಥ್ವಿ ಕೂಡ ಉತ್ತಮವಾಗಿ ಸಾಥ್ ನೀಡುತ್ತಿದ್ದಾರೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ದೊಡ್ಡ ಮಗಳಿಗೆ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಬೇಕು ಎಂಬುದು ಶರವಣ ಉದ್ದೇಶ.

ವೈಕುಂಠ ಏಕಾದಶಿಗೆ ಲಕ್ಷ ಲಡ್ಡು ವಿತರಣೆ

ವೈಕುಂಠ ಏಕಾದಶಿಗೆ ಪ್ರತಿಯೊಬ್ಬರಿಗೂ ತಿರುಪತಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ಪ್ರತಿ ವರ್ಷ ವೈಕುಂಠ ಏಕಾದಶಿಗೆ ಒಂದು ಲಕ್ಷ ಲಡ್ಡುಗಳನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಸಂತೃಪ್ತಿಯಿಂದ ಹೇಳುತ್ತಾರೆ ಶರವಣ.

2017ರಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭ

ವೈಕುಂಠ ಏಕಾದಶಿಗೆ ಲಡ್ಡು ವಿತರಣೆ ಮಾಡುವುದನ್ನು ಗಮನಿಸಿದ ಎಚ್.ಡಿ.ದೇವೇಗೌಡರು, ನನ್ನನ್ನು ಕರೆದು ‘ಬಡವರಿಗೆ ಅನ್ನ ಕೊಡುವ ಕೆಲಸ ಮಾಡು’ ಎಂದು ಸಲಹೆ ನೀಡಿದರು. ನೀವು ಅನುಮತಿ ನೀಡಿದರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಹೇಳಿದೆ. ಅವರು ನುಡಿದಂತೆ 2017ರ ಆಗಸ್ಟ್​ನಲ್ಲಿ ‘ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್’ ಆರಂಭಿಸಿದೆ. 5 ರೂ.ಗಳಿಗೆ ಉಪಾಹಾರ ಮತ್ತು 10 ರೂ.ಗಳಿಗೆ ಮಧ್ಯಾಹ್ನದ ಊಟವನ್ನು ಆರಂಭಿಸಲಾಯಿತು. ಕರೊನಾ ಲಾಕ್​ಡೌನ್​ನಲ್ಲಿಯೂ ಕ್ಯಾಂಟೀನ್ ಮುಚ್ಚದೆ ಮೊಬೈಲ್ ಕ್ಯಾಂಟೀನ್ ಮೂಲಕ ಕಂಟೇನರ್​ಗಳಲ್ಲಿ ಬೆಂಗಳೂರಿನ ಎಲ್ಲ ವಾರ್ಡ್​ಗಳಲ್ಲಿಯೂ ಊಟ ವಿತರಣೆ ಮಾಡಿದ್ದೇವೆ. ಕೂಲಿ ಕಾರ್ವಿುಕರು, ಆಟೋ ಚಾಲಕರು ಸೇರಿ ಸಮಾಜದ ಎಲ್ಲ ವರ್ಗದ ಜನರು ಇತರೆ ಕ್ಯಾಂಟೀನ್​ಗಳಿಗಿಂತೂ ಅಪ್ಪಾಜಿ ಕ್ಯಾಂಟೀನ್ ಊಟ ಚೆನ್ನಾಗಿದೆ ಎಂದು ಹೇಳಿದ್ದಾರೆ. ಪ್ರತಿದಿನ 3,500ಕ್ಕೂ ಹೆಚ್ಚಿನ ಜನರು ಸಂತೃಪ್ತಿಯಿಂದ ಊಟ ಮಾಡಿ ಹಾರೈಸುತ್ತಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು ಎನ್ನುತ್ತಾರೆ ಶರವಣ.

ಕರೊನಾ ಕಾಲದಲ್ಲಿ ಸೇವೆ

ಕೆಲಸ ಅರಸಿ ಬೀದರ್​ನಿಂದ ಬೆಂಗಳೂರಿಗೆ ಬಂದಿದ್ದ ಗರ್ಭಿಣಿಯೊ ಬ್ಬರಿಗೆ ಕರೊನಾ ಲಾಕ್​ಡೌನ್ ಆಗಿದ್ದರಿಂದ ಕೆಲಸವಿರಲಿಲ್ಲ, ಮನೆ ಯಲ್ಲಿದ್ದ ಅಕ್ಕಿ ಖಾಲಿಯಾಗಿದೆ. ಏನು ಮಾಡಬೇಕೆಂದು ತಿಳಿಯದೆ ಗೋಳಾ ಡುತ್ತಿದ್ದ ದೃಶ್ಯಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿ ಕರುಳು ಚುರುಕ್ ಎಂದಿತು. ಬಡವರಿಗೆ ಊಟ, ಮಾಸ್ಕ್ ಮತ್ತು ಔಷಧ ನೀಡಬೇಕೆಂದು ಅನಿಸಿತು. ತಕ್ಷಣವೇ ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ಅಧ್ಯಕ್ಷನಾಗಿ ಫೇಸ್​ಬುಕ್ ಲೈವ್​ನಲ್ಲಿ ನಮ್ಮ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆ ಮತ್ತು ತಾಲೂಕುವಾರು ಸಂಘಟನೆ ಮೂಲಕ ಸ್ಥಳೀಯವಾಗಿ ಅವಶ್ಯವಿರುವವರಿಗೆ ಔಷಧ, ಊಟ, ಮಾಸ್ಕ್, ವೆಂಟಿಲೇಟರ್​ಗಳನ್ನು ವಿತರಣೆ ಮಾಡಲಾಯಿತು ಎಂದು ಶರವಣ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.

ಸಪ್ತ ಆಭರಣ ಮಳಿಗೆಗಳ ಒಡೆಯ

ಆಭರಣಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್​ನ ಏಳು ಮಳಿಗೆಗಳಿಗೆ ಡಾ.ಟಿ.ಎ.ಶರವಣ ಒಡೆಯರಾಗಿದ್ದಾರೆ. ಬಸವನಗುಡಿ 2, ಎಚ್​ಎಸ್​ಆರ್ ಲೇಔಟ್, ಯಲಹಂಕ, ಕೆ.ಆರ್.ಪುರ, ನಾಗರಬಾವಿ ಮತ್ತು ಮಲ್ಲೇಶ್ವರದಲ್ಲಿ ತಲಾ ಒಂದು ಮಳಿಗೆಗಳಿವೆ. ಕಾಪೋರೇಟ್ ಶೈಲಿಯಲ್ಲಿ ಹೊಂದಿರುವ ಮಳಿಗೆಗಳಲ್ಲಿ ಹವಾನಿಯಂತ್ರಿತ ಸೇರಿ ಸುಸಜ್ಜಿತ ಸೌಲಭ್ಯಗಳಿವೆ. ಗ್ರಾಹಕರು ನಮಗೆ ಕುಟುಂಬವಿದ್ದಂತೆ. ಮಧ್ಯಮ ವರ್ಗದವರಿಗೆ ಒಂದೇ ಬಾರಿ ಚಿನ್ನ ಖರೀದಿಸುವುದು ಸಾಧ್ಯವಾಗಲ್ಲ. ಹಾಗಾಗಿ, ಚಿನ್ನ ಉಳಿಸಲು ಮತ್ತು ಹೂಡಿಕೆಗೆ ‘ಶ್ರೀ ಸಾಯಿ ಸಮೃದ್ಧಿ ಉಳಿತಾಯ ಯೋಜನೆ, ಶ್ರೀ ಸಾಯಿ ನಿತ್ಯನಿಧಿ ಉಳಿತಾಯ ಯೋಜನೆ’ ಸದ್ಬಳಕೆ ಮಾಡಿಕೊಳ್ಳಬಹುದು.

ಉದ್ಯೋಗ ಸೃಷ್ಟಿ

ಉದ್ಯೋಗಾವಕಾಶ ಸೃಷ್ಟಿಸುವ ಸಲುವಾಗಿ ಇನ್ನೂ ಹೆಚ್ಚಿನ ಆಭರಣ ಮಳಿಗೆಗಳನ್ನು ತೆರೆಯಲು ತೀರ್ವನಿ ಸಿದ್ದೇನೆ ಎನ್ನುತ್ತಾರೆ ಡಾ.ಟಿ.ಎ. ಶರವಣ.

ಅರಸಿಬಂದ ಪ್ರಶಸ್ತಿಗಳು

2008ರಲ್ಲಿ ಬೆಂಗಳೂರು ಒಕ್ಕೂಟ ವತಿಯಿಂದ ‘ವಾಸವಿ ಸಿರಿ ಪ್ರಶಸ್ತಿ’ ಪುರಸ್ಕಾರ

2012ರಲ್ಲಿ ‘ಬಸವನಗುಡಿ ರತ್ನ’ ಪ್ರಶಸ್ತಿ

2012ರಲ್ಲಿ ಉದ್ಯಮ ಹಾಗೂ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಅಶೋಕ ರತ್ನ ರಾಷ್ಟ್ರೀಯ ಪ್ರಶಸ್ತಿ

2013ರಲ್ಲಿ ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

2017ರಲ್ಲಿ ದುಬೈನ ಬಸವ ಸಮಿತಿ ವತಿಯಿಂದ ವಿಶ್ವ ಕನ್ನಡಿಗ ಪ್ರಶಸ್ತಿ

ಬಿಬಿಎಂಪಿ ನೀಡುವ ಕೆಂಪೇಗೌಡ ಪ್ರಶಸ್ತಿ

ಕರ್ನಾಟಕ ಶ್ರೇಷ್ಠ ರತ್ನ ಪ್ರಶಸ್ತಿ

ಆರ್ಯಭಟ ಪ್ರಶಸ್ತಿ

ಶ್ರೀ ಆದಿ ಶಂಕರಾಚಾರ್ಯ ಪ್ರಶಸ್ತಿ, ಟೈಮ್ಸ್​​ ಗ್ರೂಪ್​ನಿಂದ ಬಿಜಿನೆಸ್ ಎಕ್ಸಲೆಂಟ್ ಅವಾರ್ಡ್-2019

ವಾಣಿಜ್ಯ ಕ್ಷೇತ್ರದ ಸಾಧನೆ ಗುರುತಿಸಿ ಲಂಡನ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ‘ಜಿ20 ಗ್ಲೋಬಲ್ ಐಕಾನ್ ಅವಾರ್ಡ್’ ಮತ್ತು ರಾಜಕೀಯ ಕ್ಷೇತ್ರದ ಸಾಧನೆ ಗುರುತಿಸಿ ಜಿ20 ಲಂಡನ್ ಯುಕೆ ಸಂಸತ್ತಿನಲ್ಲಿ ‘ಗ್ಲೋಬಲ್ ಇನ್​ಸ್ಪಿರೇಷನಲ್ ಅವಾರ್ಡ್-2023’

ನನ್ನಂತಹ ಸಣ್ಣ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಿರುವುದಕ್ಕೆ ‘ವಿಜಯವಾಣಿ’ ಪತ್ರಿಕೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರಿಂದ ಸಮಾಜದಲ್ಲಿ ನನ್ನ ಜವಾಬ್ದಾರಿ ಜಾಸ್ತಿಯಾಗಿದೆ. ಜನ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡುತ್ತೇನೆ. | ಡಾ. ಟಿ.ಎ. ಶರವಣ ವಿಧಾನಪರಿಷತ್ ಸದಸ್ಯ 25 ವರ್ಷಗಳಿಂದ ಶರವಣ ಅವರನ್ನು ನೋಡುತ್ತಿದ್ದೇನೆ. ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಂತಹವರಿಗೆ ‘ವಿಜಯ ರತ್ನ’ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗುತ್ತಿದೆ. ಶರವಣ ಅವರ ಕಾರ್ಯವೈಖರಿಯ ಅರ್ಹತೆಗೆ ಸಂದ ಗೌರವವಿದು. ಮತ್ತಷ್ಟು ಉತ್ತಮ ಸೇವೆ ಮಾಡಲಿ. | ರಾಮಪ್ರಸಾದ್ ಸಾರ್ಥಕ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಶರವಣ ಅವರು ನನ್ನಲ್ಲಿ ತುಂಬಿದ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಸಮಾಜಸೇವೆ ಹಾಗೂ ಮಹಿಳಾ ಸಬಲೀಕರಣ ಸಾಧ್ಯವಾಯಿತು. ಬಡತನದಲ್ಲಿರುವ ಜನರನ್ನು ಆರ್ಥಿಕವಾಗಿ ಚೈತನ್ಯಗೊಳಿಸುವುದು, ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಸೇರಿ ಹತ್ತಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಇವರಿಗೆ ಪ್ರಶಸ್ತಿ ಬಂದಿರುವುದು ಸಹಜವಾಗಿಯೇ ಖುಷಿಯಾಗುತ್ತಿದೆ. | ಎ.ಎಂ. ಶ್ವೇತಾ ಗಂಜನ್ ವಾಸವಿ ಪ್ರತಿಷ್ಠಾನದ ಜಾಗತಿಕ ಕಾರ್ಯದರ್ಶಿ ಶರವಣ ಅವರ ಮಾತು ಕಠಿಣವಾದರೂ ಸಹೃದಯಿ. ಹಿಡಿದ ಕೆಲಸವನ್ನು ಬಿಡದ ಛಲವಂತ. ತನ್ನ ಜತೆಯಲ್ಲಿರವವರನ್ನೂ ಉದ್ಧಾರ ಮಾಡುವುದು ಅವರ ಗುಣ. ಈ ಕಾರಣದಿಂದಲೇ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಜನಾಂಗದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಈ ಪ್ರಶಸ್ತಿಯು ಮತ್ತ್ತ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡಲಿ. | ವಿಜಯ ರಾಜೇಶ್ ತೆರಿಗೆ ಸಲಹೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net