ತುಮಕೂರು: ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ಜಾರಿಗೊಳಿಸಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿ ವಿರೋಧಿಸಿ ಗಾಂಧಿ ಸಹಜಬೇಸಾಯ ಆಶ್ರಮದ ವತಿಯಿಂದ ತುಮಕೂರು ತಾಲೂಕು ದೊಡ್ಡ ಹೊಸೂರಿನಲ್ಲಿ ಆರಂಭಿಸಿರುವ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿತು.
ಸೋಮವಾರ ಸತ್ಯಾಗ್ರಹದಲ್ಲಿ ಭಾಗವಹಿಸಿ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, 116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮ ದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂ ಅನಾಹುತವೇ ಸಂಭವಿಸಲಿದೆ.
ಆದ್ದರಿಂದ ರೈತರು ಮಾತ್ರವಲ್ಲದೆ, ಪಟ್ಟಣದಲ್ಲಿರುವ ಜನರೂ ಕುಲಾಂತರಿ ನೀತಿಯನ್ನು ಕಾಲಿನಲ್ಲಿ ಒದ್ದು ತಿರಸ್ಕಾರ ಮಾಡಬೇಕು ಎಂದರು.
ತ್ರೇತಾಯುಗದಲ್ಲಿ ರಾಮ ಸೀತೆಯೂ ಕೃಷಿ ಮಾಡಿದ್ದರು, ಭರತಖಂಡದಲ್ಲಿ ಕೃಷಿಗೆ ಪೂರಕವಾದ ವಾತಾವರಣವಿದೆ. ಇಲ್ಲಿನ ಕೃಷಿಗೆ ಶೇ.75ರಷ್ಟು ಪ್ರಾಕೃತಿಕ ಬೆಂಬಲವಿದ್ದು, ಶೇ.25ರಷ್ಟು ಮಾತ್ರವೇ ಮಾನವನ ಶ್ರಮ ಅಗತ್ಯವಿದೆ. ಆದ್ದರಿಂದಲೇ ನಮ್ಮದು ಬಹುಪಾಲು ಕೃಷಿ ಪ್ರಧಾನವಾದ ಸಂಪದ್ಭರಿತ ರಾಷ್ಟ್ರ. ಈ ಸಾರ್ವಭೌಮತೆಯನ್ನು ವಶಕ್ಕೆ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ಹುನ್ನಾರ ನಡೆಸಿವೆ. ದೇಶೀ ಬೆಳೆಗಳನ್ನು ನಾಶ ಮಾಡಿ ಕುಲಾಂತರಿ ವ್ಯವಸ್ಥೆಯನ್ನು ತರುವ ಮೂಲಕ ನಮ್ಮ ಕೃಷಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಯೋಜನೆಯೇ ರೂಪಿಸಿವೆ. ಅನ್ನ ಹಾಕುವ ರೈತರನ್ನು ಗ್ರಾಹಕರನ್ನಾಗಿ ಮಾರ್ಪಾಡು ಮಾಡುವ ದೊಡ್ಡ ಸಂಚು ನಡೆದಿದೆ ಎಂದರು. ಹಸಿರು ಕ್ರಾಂತಿಯ ಹಾನಿಯಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈಗ 3ನೇ ಕೃಷಿ ಕ್ರಾಂತಿ ತರಲು ಹೊಂಚು ಹಾಕುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ನಮ್ಮ ಧ್ವನಿ ಹಾಗೂ ಪ್ರತಿಭಟನೆಗಳ ಸಾಮರ್ಥ್ಯ ಹೆಚ್ಚಾದರೆ ಸಂವಿಧಾನಾತ್ಮಕವಾಗಿಯೂ ಮಹತ್ವ ದೊರೆಯಲಿದ್ದು, ಸರ್ಕಾರಗಳಿಗೆ ಚಳವಳಿಗಳ ಮೂಲಕವೇ ಅರ್ಥ ಮಾಡಿಸೋಣ ಎಂದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ನಮ್ಮ ದೇಶದ ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಕೃಷಿ, ಕಲೆ, ಸಾಹಿತ್ಯ, ಆಡಳಿತ, ಸಂಸತಿ ಒಂದಕ್ಕೊಂದು ಅಂತರ ಸಂಬಂಧ ಹೊಂದಿದ್ದು, ಈ ವ್ಯವಸ್ಥೆಯನ್ನು ಸರಿ ಮಾಡಬೇಕಾದರೆ ಮಸನೋಬು ಫುಕುವೋಕ, ಜೆ.ಸಿ.ಕುಮಾರ್, ಮಹಾತ್ಮಗಾಂಧಿ ಅವರ ತತ್ವದಡಿಯಲ್ಲಿ ಹೋರಾಟಗಳು ಮುನ್ನಡೆಯಬೇಕು ಎಂದರು. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ರೀತಿಯ ಭತ್ತದ ತಳಿಗಳಿದ್ದವು. ಅವೆಲ್ಲವೂ ಈಗ ನಾಶವಾಗಿ ಕುಲಾಂತರಿ ಭತ್ತ ರಾರಾಜಿಸುತ್ತಿದೆ. ಜಪಾನ್ ಹಾಗೂ ಚೀನಾದಲ್ಲಿ ಕುಲಾಂತರಿ ಮನುಷ್ಯರನ್ನು ಸೃಷ್ಟಿ ಮಾಡಲಾಗಿದೆ. ಇದು ಪ್ರಕೃತಿ ವಿರುದ್ಧವಾದುದು. ಹೀಗೇ ಮುಂದುವೆರೆದರೆ 2050ರ ಹೊತ್ತಿಗೆ ಭೂಮಂಡಲ ವಿನಾಶವಾಲಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಮುಖಂಡ ಬಡಗಲಪುರ ನಾಗೇಂದ್ರ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಎಸ್.ಎನ್ ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಹೋರಾಟಗಾರರಾದ ಶಾಂತಕೃಷ್ಣ, ತನುಜಾ, ನೇತ್ರಾವತಿ, ಶಾರದಾ, ಬಿ.ಮರುಳಯ್ಯ, ಕೃಷಿ ವಿಜ್ಞಾನಿ ಡಾ.ಮಂಜುನಾಥ್,ಪರಿಸರವಾದಿ ಸಿ.ಯತಿರಾಜು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಇದ್ದರು.