ಮಹಿಳಾ ಸಂಘಗಳ ಕಾರ್ಯ ನಿರ್ವಹಣೆ ಉತ್ತಮ

skp co-opp
ಶಿಕಾರಿಪುರದಲ್ಲಿ ಸಹಕಾರ ಸಂಘಗಳ ತರಬೇತಿ ಶಿಬಿರವನ್ನು ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಉದ್ಘಾಟಿಸಿದರು. ಬಿ.ಡಿ.ಭೂಕಾಂತ್, ನೇತ್ರಾ ದೇವರಾಜ್, ಶಾಂತಲಾ ಭೂಕಾಂತ್, ಶಿವಮ್ಮ ಬಸವರಾಜಪ್ಪ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್ ಇತರರಿದ್ದರು.
Published on

ಶಿಕಾರಿಪುರ: ಮಹಿಳಾ ಪತ್ತಿನ ಸಹಕಾರಿರ ಸಂಘಗಳು ಸಮರ್ಥವಾಗಿ ಕೆಲಸ ಮಾಡುತ್ತ ಯಶಸ್ಸು ಕಾಣುತ್ತಿವೆ. ಮಹಿಳಾ ಪತ್ತಿನ ಸಹಕಾರ ಸಂಘಗಳು ಇನ್ನೂ ಹೆಚ್ಚಾದರೆ ಮಹಿಳೆಯರಿಗೆ ಆರ್ಥಿಕವಾಗಿ ಮತ್ತಷ್ಟು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಹೇಳಿದರು.

ಪಟ್ಟಣದ ಕಂತೆ ಸಿದ್ದೇಶ್ವರ ಸಭಾಂಗಣದಲ್ಲಿ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ಸಂಘ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘದ ಆಶ್ರಯದಲ್ಲಿ ಸಾಗರ ಉಪ ವಿಭಾಗದ ಪತ್ತಿನ ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂತಹ ತರಬೇತಿ ಶಿಬಿರಗಳು ಅಗತ್ಯ. ಪತ್ತಿನ ಸಹಕಾರ ಸಂಘಗಳನ್ನು ನಡೆಸಲು ಸಂಪನ್ಮೂಲ ವ್ಯಕ್ತಿಗಳಿಂದ ನೀಡುವ ತರಬೇತಿ ಅತ್ಯಂತ ಮುಖ್ಯವಾದುದು. ಪತ್ತಿನ ಸಹಕಾರ ಸಂಘಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರಾಜ್ಯ ತೋಟಗಾರಿಕಾ ಮಹಾಮಂಡಳ ಅಧ್ಯಕ್ಷ ಬಿ.ಡಿ.ಭೂಕಾಂತ್ ಮಾತನಾಡಿ, ಮಹಿಳೆಯರಿಗೆ ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಾಲ ವಿತರಣೆ ಮತ್ತು ವಸೂಲಾತಿಗಳಲ್ಲಿಯೂ ಮಹಿಳಾ ಸಂಘಗಳು ಮುಂಚೂಣಿಯಲ್ಲಿವೆ. ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚು ಮಹಿಳಾ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನೇತ್ರಾ ದೇವರಾಜ್, ನಿರ್ದೇಶಕರಾದ ಶಿವಮ್ಮ ಬಸವರಾಜಪ್ಪ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಕೆ.ಜಿ.ಮಮತಾ ಚಂದ್ರಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಸದಸ್ಯ ನಾಗರಾಜ್ ಸ್ವಾಮಿ, ಶಾರದಮ್ಮ ನರಸಿಂಹಮೂರ್ತಿ, ಬಸವೇಶ್ವರ ಸಹಕಾರ ಒಕ್ಕೂಟ ಸಂಘದ ಅಧ್ಯಕ್ಷ ಮೌನೇಶ್ವರಪ್ಪ, ಉಪಾಧ್ಯಕ್ಷ ಪರಮೇಶ್ವರಪ್ಪ, ಚುರ್ಚಿಗುಂಡಿ ಕುಮದ್ವತಿ ಮಹಿಳಾ ಪತ್ತಿನ ಸಂಘದ ಅಧ್ಯಕ್ಷ ಎಂ.ವಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net