

ಮಂಡ್ಯ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ಮೇಲುಕೋಟೆಯ ಗುಡಿ-ಗೋಪುರಗಳು, ರಾಜಬೀದಿಗಳು, ಕಲ್ಯಾಣಿಗಳು,ಯೋಗಾನರಸಿಂಹಸ್ವಾಮಿ ಬೆಟ್ಟ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ವೈರಮುಡಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ಆರಂಭವಾಗಿರುವ ದೀಪಾಲಂಕಾರ ಮಾ.28ರವರೆಗೂ ಇರಲಿದೆ. ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವ ಮಾ.21ರ ರಾತ್ರಿ ನಡೆಯಲಿದೆ. ವೈರಮುಡಿ ಕಿರೀಟಧಾರಣ ಮಹೋತ್ಸವದ ನಂತರ ಮಾ.24ರಂದು ರಥೋತ್ಸವ, 25 ತೆಪ್ಪೋತ್ಸವ, 26ರಂದು ತೀರ್ಥಸ್ನಾನ 27ರಂದು ಮಹಾಭಿಷೇಕ ಹಾಗೂ 28ರಂದು ಶೇರ್ತಿಸೇವೆ ನಡೆಯುವುದರಿಂದ ಅಂದಿನವರೆಗೂ ಭಕ್ತರು ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ.
ಪ್ರಸಕ್ತ ವರ್ಷ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ದೀಪಾಲಂಕಾರ ಮಾಡಲಾಗಿದೆ. ಕಣಿವೆಯಿಂದ ಮೇಲುಕೋಟೆ ದೇವಾಲಯ ಸಂಪರ್ಕಿಸುವ ರಸ್ತೆಗಳು, ಕಲ್ಯಾಣಿಗಳು, ಬಸ್ ನಿಲ್ದಾಣದಿಂದ ಬೆಟ್ಟದವರೆಗಿನ ರಸ್ತೆ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ವರ್ಣಮಯ ದೀಪಾಲಂಕಾರ ಮಾಡಲಾಗಿದೆ. ಚೆಲುವನಾರಾಯಣಸ್ವಾಮಿ ರಾಜಗೋಪುರಕ್ಕೆ ಪಾರ್ಕರ್ ಲೈಟ್ ಅಳವಡಿಸಿದ್ದು ಪ್ರತಿ 15 ಸೆಕೆಂಡಿಗೊಮ್ಮೆ ಬಣ್ಣ ಬದಲಾಗುವುದು ನೋಡುಗರನ್ನು ಸೆಳೆಯುತ್ತಿದೆ.
ವಿಶೇಷ ಪುಷ್ಪಾಲಂಕಾರ ಒಂದೆಡೆ ದೀಪಾಲಂಕಾರಕ್ಕೆ ಆದ್ಯತೆ ನೀಡಿದರೆ ಮತ್ತೊಂದೆಡೆ ವೈರಮುಡಿ ಉತ್ಸವದಂದು ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣವನ್ನು ಪುಷ್ಪಗಳಿಂದ ಅಲಂಕರಿಸಲು ಸಿದ್ಧತೆ ಮಾಡಲಾಗಿದೆ. ವೈರಮುಡಿ ಉತ್ಸವ ಆರಂಭವಾಗುವ ರಾಮಾನುಜ ಸನ್ನಿಧಿಯಲ್ಲಿ ಪಾತಾಳಾಂಕಣ ನವರಂಗ ಹಾಗೂ ರಾಜಗೋಪುರದ ಬಾಗಿಲ ಬಳಿ ಪುಷ್ಪಾಲಂಕಾರ ಮಾಡಲಾಗುತ್ತಿದೆ. ಬೆಂಗಳೂರಿನ ನಂದೀಶ್ ಮತ್ತು ತಂಡ ದೇವರಿಗೆ ತೋಮಾಲೆ ಕಟ್ಟುವ, ಪುಷ್ಪಾಲಂಕಾರ ಮಾಡುವ ಸೇವೆಯಲ್ಲಿ ತೊಡಗಿಸಿಕೊಂಡಿದೆ.