ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ

25NGD13
ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ರತ್ನಮ್ಮ ನಿವಾಸಕ್ಕೆ ತೆರಳಿದ ಮಾಜಿ ಶಾಸಕ ಬಿ.ಹರ್ಷವರ್ಧನ್ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ ಧನಸಹಾಯ ಮಾಡಿದರು.
Published on

ನಂಜನಗೂಡು: ಹೆಡಿಯಾಲ ಭಾಗದಲ್ಲಿ ಒಂದು ತಿಂಗಳ ಅವಧಿಯಲ್ಲೇ ಇಬ್ಬರ ಮೇಲೆ ಹುಲಿ ದಾಳಿ ನಡೆದಿದ್ದರೂ ಅದನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಈ ಭಾಗದ ಜನರಲ್ಲಿ ಭಯ ಮತ್ತು ಆತಂಕ ಇಮ್ಮಡಿಯಾಗಿದೆ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ಮೃತ ರತ್ನಮ್ಮ ಅವರ ಅಂತಿಮ ದರ್ಶನ ಪಡೆದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅ.31ರಂದು ಮಹದೇವನಗರದ ವೆಂಕಟಭೋವಿ ಅವರ ಮೇಲೆ ಹುಲಿ ದಾಳಿ ನಡೆಸಿದಾಗಲೇ ಅರಣ್ಯ ಇಲಾಖೆ ಎಚ್ಚೆತ್ತು ಹುಲಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿತ್ತು. ಅವರು ಮೈಮರೆತ ಪರಿಣಾಮವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಮಹಿಳೆಯ ಮೇಲೆ ದಾಳಿ ನಡೆಸಿ ಬಲಿ ಪಡೆದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಹೆಡಿಯಾಲ ಭಾಗದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಆದರೂ ಆಡಳಿತ ವ್ಯವಸ್ಥೆ ಮಾತ್ರ ಜನರ ಸಂಕಷ್ಟಕ್ಕೆ ಧ್ವನಿಯಾಗದೆ ಮೈಮರೆತ್ತಿದ್ದಾರೆ. ಇದು ಈ ಭಾಗದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಅವಘಡ ನಡೆಯದಂತೆ ಅರಣ್ಯ ಇಲಾಖೆ ಕ್ರಮ ವಹಿಸಬೇಕು. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ರೈತರು ವಾಸ ಮಾಡಲು ತುಂಬ ಕಷ್ಟಕರವಾಗಿದೆ ಎಂದರು.

ಈಗಾಗಲೇ ಹೆಡಿಯಾಲ ಭಾಗದಲ್ಲಿ ಇಬ್ಬರ ಮೇಲೆ ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದರೂ ಸರ್ಕಾರ ಮೌನವಾಗಿರುವುದು ಖಂಡನೀಯ. ಸರ್ಕಾರ ರೈತರ ಪರ ಕೆಲಸ ಮಾಡಲು ಸಂಪೂರ್ಣ ವಿಫಲವಾಗಿದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಹಾಡಹಗಲೇ ರೈತರ ಮೇಲೆ ದಾಳಿ ಮಾಡುತ್ತಿವೆ. ಈಗಿರುವಾಗ ಈ ಭಾಗದ ರೈತರು ಜೀವನ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ. ರೈತರು ತಮ್ಮ ಜಮೀನುಗಳಿಗೆ ತೆರಳಿ ಕೆಲಸ ಮಾಡಲು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಈ ಭಾಗದ ಜನರಲ್ಲಿ ಆವರಿಸಿರುವ ಆತಂಕ ದೂರ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net