

ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು- ಸಂಘಗಳು ಮಹಿಳಾ ಸಬಲೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ವಿಶೇಷವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲ ತುಂಬುವಲ್ಲಿ ಕೊಡುಗೆ ನೀಡುತ್ತಿವೆ. ಈ ಸಂಘಗಳಿಗೆ ಮತ್ತಷ್ಟು ಬಲತುಂಬಲು ರಾಜ್ಯ ಸರ್ಕಾರ ಮುಂದಾಗಿರುವುದು ಸಕಾಲಿಕವಾಗಿದೆ. ಯಾವುದೇ ಉದ್ಯಮ ಯಶಸ್ಸು ಸಾಧಿಸಬೇಕಾದರೆ ಉತ್ತಮ ಉತ್ಪನ್ನದ ಜತೆಗೆ ಅದಕ್ಕೆ ಸೂಕ್ತವಾದ ಮಾರುಕಟ್ಟೆ ಕಂಡುಕೊಳ್ಳಬೇಕು.
ಈ ನಿಟ್ಟಿನಲ್ಲಿ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರವು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಉದ್ಯಮಶೀಲತೆಯ ಸ್ಪರ್ಶ ತುಂಬಲು ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು (ಸಂಜೀವಿನಿ) ಐಐಎಂಬಿ ಜತೆ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ ಬಜೆಟ್ನಲ್ಲಿ 30 ಸಾವಿರ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಐಐಎಂಬಿ ಇನ್ಕ್ಯುಬೇಟರ್ನಿಂದ 300 ಮಹಿಳೆಯರಿಗೆ ಉದ್ಯಮ, ವ್ಯವಹಾರ, ಉತ್ಪಾದನೆ ಕುರಿತು ತರಬೇತಿ, ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ. ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಜಾಲದ ಸಂಪರ್ಕ, ಗ್ರಾಮೀಣ ಉದ್ಯಮಗಳಿಗೆ ಅನುಕೂಲವಾಗುವ ತಂತ್ರಜ್ಞಾನದ ನೆರವನ್ನು ನೀಡಲು ಯೋಜಿಸಲಾಗಿದೆ.
2 ವರ್ಷಗಳ ಈ ಕಾಯರ್åಕ್ರಮಕ್ಕೆ ಕೇಂದ್ರ ಸರ್ಕಾರ 10 ಕೋಟಿ ರೂ.ಗಳ ನೆರವು ಒದಗಿಸುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ, ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಹಾಗೂ ಅಮೆಜಾನ್ನಂತಹ ಆನ್ಲೈನ್ ವೇದಿಕೆಗಳಲ್ಲಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗುವುದು; ಇದಕ್ಕಾಗಿ ರೂಪಿಸಿರುವ ಪ್ರಾಯೋಗಿಕ ಯೋಜನೆಗಳು ಯಶಸ್ಸಿನ ಮಾರ್ಗದಲ್ಲಿವೆ ಎಂದು ಹೇಳಿರುವುದು ಆಶಾದಾಯಕವಾಗಿದೆ. ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ 2000ನೇ ಇಸ್ವಿಯಲ್ಲಿ ಸ್ತ್ರೀ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ರಾಜ್ಯದ 176 ತಾಲ್ಲೂಕುಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳನ್ನು ರಚನೆ ಮಾಡಲಾಗಿದೆ.
ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಮಹಿಳೆಯರನ್ನು ತೊಡಗಿಸಿ, ಆರ್ಥಿಕ ಸ್ಥಿರತೆ ಮೂಡಿಸುವುದು ಈ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಸಾಲ ಸೌಲಭ್ಯ, ಪ್ರೋತ್ಸಾಹ ಧನ, ತರಬೇತಿ, ವಸ್ತು ಪ್ರದರ್ಶನ- ಮಾರಾಟ ಮೇಳ ಮುಂತಾದವುಗಳ ಮೂಲಕ ನಿರಂತರ ನೆರವನ್ನೂ ಕಲ್ಪಿಸಲಾಗುತ್ತಿದೆ. ಈ ಸ್ವಸಹಾಯ ಗುಂಪುಗಳನ್ನು ಕಿರುಉದ್ದಿಮೆಗಳಾಗಿ ರೂಪಿಸಲು ತಲಾ 1 ಲಕ್ಷ ರೂಪಾಯಿ ಬೀಜಧನ ಒದಗಿಸುವ ಘೋಷಣೆಯನ್ನು ಕಳೆದ ಬಜೆಟ್ನಲ್ಲಿ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ಗುಂಪುಗಳ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗಿ, ಸದಸ್ಯ ಮಹಿಳೆಯರು ಆರ್ಥಿಕವಾಗಿಯೂ ಹಿನ್ನಡೆ ಅನುಭವಿಸುವಂತಾಗಿತ್ತು. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸ್ತ್ರೀಶಕ್ತಿ ಸ್ವಹಾಯ ಸಂಘಗಳಿದ್ದು, ಒಟ್ಟು 20 ಲಕ್ಷ ಸದಸ್ಯರಿದ್ದಾರೆ. ಸರ್ಕಾರವು ಸೂಕ್ತ ಯೋಜನೆ- ಕಾರ್ಯಕ್ರಮಗಳ ಮೂಲಕ ನೆರವಾದರೆ, ತಂತ್ರಜ್ಞಾನದ ನೆರವನ್ನು ಕಲ್ಪಿಸಿದರೆ ಸುಸ್ಥಿರ, ಸದೃಢ ಕುಟುಂಬ-ಸಮಾಜ ರೂಪುಗೊಳ್ಳಲು ಹಾಗೂ ಆರ್ಥಿಕ ಸ್ಥಿರತೆ ಸಾಧಿಸಲು ಇವರು ಬಹುದೊಡ್ಡ ಕೊಡುಗೆ ನೀಡುವುದರಲ್ಲಿ ಸಂದೇಹವಿಲ್ಲ. ಸರ್ಕಾರದ ಭರವಸೆ ಯಥಾವತ್ತಾಗಿ ಕೃತಿಯಲ್ಲಿ ಬರಬೇಕಷ್ಟೆ.