ಮೊದಲ ಲಾಕಪ್ ಡೆತ್ ಸ್ಟೇಷನ್ ಇನ್ನು ನೆನಪು

sheshadripura PS
Published on

ಬೆಂಗಳೂರು: ರಾಜಧಾನಿಯಲ್ಲಿ ಮೊದಲ ಲಾಕಪ್ ಡೆತ್ ನಡೆದು ಅಂದಿನ ಮುಖ್ಯಮಂತ್ರಿ ರಾಜೀನಾಮೆಗೆ ಕಾರಣವಾಗಿದ್ದ ಶೇಷಾದ್ರಿಪುರ ಪೊಲೀಸ್ ಠಾಣೆ ಇನ್ಮುಂದೆ ನೆನಪು ಮಾತ್ರ.

ಶೇಷಾದ್ರಿಪುರ ಠಾಣೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಗೃಹ ಇಲಾಖೆ ಮುಂದಾಗಿದ್ದು, ಸಿಲಿಕಾನ್ ಸಿಟಿಯಲ್ಲಿ 133 ವರ್ಷಗಳ ಇತಿಹಾಸ ಹೊಂದಿರುವ ಠಾಣೆ ಇತಿಹಾಸದ ಪುಟ ಸೇರಿದೆ.

ಮೈಸೂರಿನ ದಿವಾನ್ ಕೆ. ಶೇಷಾದ್ರಿ ಅಯ್ಯರ್ 1892ರಲ್ಲಿ ಈ ಠಾಣೆ ನಿರ್ಮಿಸಿದ್ದರು. ಅದಕ್ಕಾಗಿ ಶೇಷಾದ್ರಿಪುರ ಪೊಲೀಸ್ ಠಾಣೆ ಎಂದೇ ಹೆಸರು ನಾಮಕರಣ ಮಾಡಲಾಗಿದೆ. 1958ರಲ್ಲಿ ಮನೆ ಕೆಲಸದಾಕೆ ವಿರುದ್ಧ ಕಳ್ಳತನ ದೂರು ಬಂದ ಹಿನ್ನೆಲೆಯಲ್ಲಿ ಅಂದಿನ ಪೊಲೀಸರು ಮುನಿಯಮ್ಮ ಎಂಬಾಕೆಯನ್ನು ಬಂಧಿಸಿದ್ದರು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುವಾಗ ಮಹಿಳೆ ಠಾಣೆಯಲ್ಲೇ ಜೀವ ಬಿಟ್ಟಿದ್ದಳು.

ಅಂದಿಗೆ ರಾಜ್ಯದಲ್ಲಿ ಲಾಕಪ್ ಡೆತ್ ಪ್ರಕರಣ ಮೊದಲ ಕೇಸ್ ಆಗಿತ್ತು. ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ವಿಧಾನಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರನ್ನು ಪ್ರತಿಪಕ್ಷದ ಸ್ಥಾನದಲ್ಲಿದ್ದ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಗೃಹ ಸಚಿವರಾಗಿದ್ದ ಸಿ.ಎಂ. ಪೂಣಚ್ಚ, ಸಮರ್ಥನೆ ಮಾಡಿಕೊಳ್ಳುವಲ್ಲಿ ವಿಲರಾಗಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಲಾಗಿತ್ತು. ಆ ಕಾರಣಕ್ಕಾಗಿಯೇ ನಿಜಲಿಂಗಪ್ಪ ರಾಜೀನಾಮೆ ನೀಡಿದರು ಎಂದು ಈಗಲೂ ಹೇಳಲಾಗುತ್ತದೆ.

ಅತ್ಯಂತ ಹಳೆಯ ಠಾಣೆಗಳಲ್ಲಿ ಒಂದಾಗಿರುವ ಶೇಷಾದ್ರಿಪುರ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸಲು ಪೊಲೀಸ್ ಇಲಾಖೆ ತಯಾರಿ ನಡೆಸಲಾಗಿದೆ. ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಯೋಜನೆ ರೂಪಿಸಲಾಗುತ್ತಿದೆ. ಪ್ರಸ್ತುತ ರಸಲ್‌ದಾರ್ ಸ್ಟ್ರೀಟ್‌ನಲ್ಲಿ ಬಾಡಿಗೆ ಕಟ್ಟಡಕ್ಕೆ ಶೇಷಾದ್ರಿಪುರ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿಗೂ ಘಂಟಾನಾದ

1892ರಲ್ಲಿ ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡಿದ ಸಮಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಸಮಯ ತಿಳಿಸುವ ಸಲುವಾಗಿ ಘಂಟೆಯನ್ನು ಕಟ್ಟಲಾಗಿತ್ತು. ರಾತ್ರಿ ಗಸ್ತು ಇದ್ದವರು ಸಂಜೆ 6ರಿಂದ ಬೆಳಗ್ಗೆ 6ರವರೆಗೂ ತಾಸಿಗೊಮ್ಮೆ ಘಂಟೆ ಬಾರಿಸುತ್ತಿದ್ದರು. ರಾತ್ರಿ ಪಾಳಿ ಅಧಿಕಾರಿ, ಸಿಬ್ಬಂದಿಯನ್ನು ಎಚ್ಚೆರಿಸುತ್ತಿದ್ದರು. ಈಗಲೂ ಘಂಟಾನಾದ ಕೇಳಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net