ಕೃಷಿಯಲ್ಲಿ ಬಂಗಾರದ ಬದುಕು ಕಟ್ಟಿಕೊಂಡ ರೈತ

sor p
ತಾವು ಬೆಳೆದ ಕಾಳು ಮೆಣಸು ಬೆಳೆಯನ್ನು ಪ್ರದರ್ಶಿಸುತ್ತಿರುವ ಸತೀಶ್.
Published on

ಸೊರಬ: ಕೃಷಿ ಲಾಭದಾಯಕವಲ್ಲ ಎಂಬುದು ಬಹುತೇಕರ ಮಾತು. ಇಂತಹ ಮಾತುಗಳ ನಡುವೆಯೇ ಕೃಷಿ ಕ್ಷೇತ್ರದಲ್ಲಿ ಅನೇಕ ಭಿನ್ನ ಪ್ರಯತ್ನಗಳ ಮೂಲಕ ಗಮನಸೆಳೆದಿದ್ದಾರೆ. ಇಂಥವರ ಸಾಲಿನಲ್ಲಿ ಸೊರಬ ತಾಲೂಕಿನ ಉದ್ರಿ ಗ್ರಾಮದ ಯುವಕ ಸತೀಶ್ ಕೂಡ ಒಬ್ಬರು.

ಇವರು ಓದಿದ್ದು ಕಡಿಮೆಯಾದರೂ ಕೃಷಿ ಕ್ಷೇತ್ರದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತ ಕೃಷಿ ಕುಟುಂಬದವರಾದ ಸತೀಶ್ ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮುಗಿಸಿ ಕೃಷಿಯಲ್ಲಿ ತೊಡಗಿಸಿಕೊಂಡರು.

ಶಾಲೆಗೆ ಹೋಗುವ ದಿನಗಳಲ್ಲಿಯೇ ಹಿರಿಯರು ಮಾಡುತ್ತಿದ್ದ ಕೃಷಿ ಚಟುವಟಿಕೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಸತೀಶ್ ಎಸ್‌ಎಸ್‌ಎಲ್‌ಸಿ ಮುಗಿದ ತಕ್ಷಣ ಮನೆಯವರ ಜತೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಅನುಭವ ಪಡೆದರು.

ನಂತರದಲ್ಲಿ ತಾವೇ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಒಂದೇ ಭೂಮಿಯಲ್ಲಿ ಬಹುಬೆಳೆಗಳನ್ನು ಬೆಳೆದಿದ್ದಾರೆ. ಮೊದಲು ಅನಾನಸ್ ಬೆಳೆದ ಸತೀಶ್, ನಂತರ 9 ಎಕರೆಯಲ್ಲಿ ಅಡಕೆ, ಬಾಳೆ ಬೆಳೆ ಹಾಕಿ ಉತ್ತಮ ಲಾಭ ಗಳಿಸಿದ್ದಾರೆ. ಒಂದೇ ಭೂಮಿಯಲ್ಲಿ ಪ್ರತಿಬಾರಿ ವಿಭಿನ್ನ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಈ ಹಿಂದೆ ತೋಟದಲ್ಲಿ ಕಾಳು ಮೆಣಸು ಬೆಳೆಯಲು ಮಂದಾಗಿ ಪಣಿಯರ್ ಎಂಬ ಹೆಸರಿನ 5000 ಸಾವಿರ ಮೆಣಸಿನ ಸಸಿಗಳನ್ನು ಬೆಳೆಸಲಾರಂಭಿಸಿದರು. ಸಸಿ ನೆಟ್ಟ 3 ವರ್ಷದಲ್ಲಿ ಸಲು ಬರಲು ಪ್ರಾರಂಭಿಸಿತು. ಅಡಕೆ ತೋಟದ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯಲು ಪ್ರಾರಂಭಿಸಿದರು. ಕುರಿ, ಕೋಳಿ ಹಾಗೂ ಹಸುಗಳ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆದಿದ್ದಾರೆ.

ಪ್ರಸ್ತುತ 50 ಕ್ವಿಂಟಾಲ್ ಕಾಳುಮೆಣಸು ಬೆಳೆದಿದ್ದಾರೆ. ಈ ರೀತಿ ಅತ್ಯಧಿಕ ಬೆಳೆ ಬೆಳೆದ ಸತೀಶ್ ತಾಲೂಕಿನ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ಕ್ವಿಂಟಾಲ್‌ವೊಂದಕ್ಕೆ 70 ಸಾವಿರ ರೂ. ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net