

ನವದೆಹಲಿ: ಸಿಎಎ ವಿರುದ್ಧದ ಹೋರಾಟಗಾರರ ಮೇಲೆ ಗುಂಡು ಹಾರಿಸಿದ ಕಪಿಲ್ ಗುಜ್ಜಾರ್ನ ಕುಟುಂಬ, ಆತ ಗುಂಡು ಹಾರಿಸಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟಿದೆ. ಹೋರಾಟದಿಂದಾಗಿ ರಸ್ತೆಗಳಲ್ಲಿ ಸಂಚಾರ ನಿಲ್ಲಿಸಲಾಗಿದ್ದು, ಹೆಚ್ಚಿನ ದೂರ ಕ್ರಮಿಸಬೇಕಾದ ಕಾರಣ ಆತ ಗುಂಡು ಹಾರಿಸಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
25 ವರ್ಷದ ಕಪಿಲ್ ಗುಜ್ಜಾರ್ ದೆಹಲಿ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿರುವ ಡಲ್ಲುಪುರ ಗ್ರಾಮದಲ್ಲಿ ಹಾಲಿನ ಡೈರಿ ನಡೆಸುತ್ತಿದ್ದ ವ್ಯಕ್ತಿ. ವಿದ್ಯಾಭ್ಯಾಸ ಮಾಡುತ್ತಿದ್ದಾಗ ರಿಪೋರ್ಟರ್ ಆಗಬೇಕೆಂಬ ಕನಸ್ಸಿತ್ತಾದರೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ತಂದೆಯ ಡೈರಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾನೆ. ಒಂದು ವರ್ಷದ ಮಗುವಿಗೆ ತಂದೆಯಾಗಿರುವ ಈತನಿಗೆ ಯಾವುದೇ ರೀತಿಯ ಧರ್ಮೀಯ ಭಾವನೆಯಾಗಲೀ ಅಥವಾ ದ್ವೇಷವಾಗಲೀ ಇಲ್ಲ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರತಿನಿತ್ಯ ಕಪಿಲ್ ಶಾಹೀನ್ ಬಾಗ್ ಮಾರ್ಗವಾಗಿ ದಕ್ಷಿಣ ದೆಹಲಿಯ ಬಾದರ್ಪುರ್ ಡೈರಿಗೆ ಹೋಗುತ್ತಿದ್ದ. ತನ್ನ ಮನೆಯಿಂದ 10 ಕಿ.ಮೀ. ದೂರದಲ್ಲಿ ಆ ಡೈರಿಯಿತ್ತು. ಆದರೆ ಒಂದು ತಿಂಗಳಿನಿಂದ ಶಾಹೀನ್ ಬಾಗ್ನಲ್ಲಿ ಹೋರಾಟ ನಡೆಯುತ್ತಿದ್ದು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 35ಕಿ.ಮೀ ದೂರದ ಹಾದಿಯನ್ನು ಕ್ರಮಿಸಿಕೊಂಡು ಕಪಿಲ್ ಮನೆಗೆ ಬರಬೇಕಾಗಿತ್ತು. ಇದೇ ಕಾರಣದಿಂದಾಗಿ ಬೇಸತ್ತು ಆತ ಗುಂಡು ಹಾರಿಸಿದ್ದಾನೆ. ಆದರೆ ಮನೆಯಿಂದ ಹೊರಡುವಾಗ ಆತನ ಕೈನಲ್ಲಿ ಪಿಸ್ತೂಲು ಇರಲಿಲ್ಲ. ಅವನು ಶಾಹೀನ್ ಬಾಗ್ಗೆ ಹೋಗುತ್ತಾನೆಂದು ಗೊತ್ತಾಗಿದ್ದರೆ ನಾವು ಅವನನ್ನು ಮನೆಯಿಂದ ಹೊರಗೆ ಹೋಗುವುದಕ್ಕೇ ಬಿಡುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಪಿಲ್ ಒಬ್ಬ ಸರಳ ವ್ಯಕ್ತಿ ಎಂದು ತಿಳಿಸಿರುವ ಕುಟುಂಬಸ್ಥರು ಆತನಿಗೆ ಯಾರೋ ಪ್ರಚೋದನೆ ನೀಡಿ ಈ ಕೆಲಸವನ್ನು ಮಾಡಿಸಿದ್ದಾರೆ ಎಂದು ದೂರಿದ್ದಾರೆ. ಆತನಿಗೆ ಮುಸ್ಲಿಂ ಸ್ನೇಹಿತರೂ ಇದ್ದು, ಹಬ್ಬಗಳಲ್ಲಿ ಅವರು ತಮ್ಮ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದುದ್ದಾಗಿ ಅವರು ತಿಳಿಸಿದ್ದಾರೆ.
ಕಪಿಲ್ 2010ರಲ್ಲಿ ಜಂಗ್ಪುರ್ಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷದಿಂದ ಚುನಾವಣೆಗೆ ನಿಂತು ಸೋತಿದ್ದ. ಮೊನ್ನೆ ಶಾಹೀನ್ ಬಾಗ್ನಲ್ಲಿ ಸಿಎಎ ವಿರುದ್ಧದ ಹೋರಾಟಕ್ಕೆ ನುಗ್ಗಿ, ಹೋರಾಟಗಾರರ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದ. ಆ ವೇಳೆ ಜೈ ಶ್ರೀ ರಾಮ್ ಘೋಷಣೆ ಕೂಗಿದ ಆತ, ಭಾರತದಲ್ಲಿ ಹಿಂದೂಗಳನ್ನು ಬಿಟ್ಟು ಬೇರೆಯವರು ಇರುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದ. ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದ್ದು ಸದ್ಯ ಕಪಿಲ್ ಪೊಲೀಸರ ವಶದಲ್ಲಿದ್ದಾನೆ. (ಏಜೆನ್ಸೀಸ್)