ಪ್ರಕೃತಿಯನ್ನು ಶೋಷಿಸುವುದು ಮಹಾಪಾಪ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

asdasdasdqq
Published on

ಪ್ರಕೃತಿಯ ವಿರುದ್ಧವಾಗಿ ಬದುಕಲು ಹೋದರೆ ನಿಸರ್ಗ ಅದೆಷ್ಟು ದಿನ ತಡೆದುಕೊಂಡೀತು? ಇಡೀ ಪ್ರಾಕೃತಿಕ ವ್ಯವಸ್ಥೆ ಬಹು ವೈಶಿಷ್ಟ್ಯದಿಂದಲೂ, ತನ್ನದೇ ಆದ ಸೂಕ್ಷ್ಮತೆಗಳಿಂದಲೂ ಕೂಡಿದೆ. ಇದನ್ನು ಅರಿತುಕೊಂಡು ಮನುಜ ನಿಸರ್ಗಕ್ಕೆ ಸನಿಹವಾಗಿ ಬದುಕುತ್ತಿದ್ದ. ಪ್ರಕೃತಿಯನ್ನು ಶೋಷಿಸುವುದು ಮಹಾಪಾಪ, ಅಪರಾಧ ಎಂಬ ಭಾವನೆ ನೆಲೆಸಿತ್ತು. ಆದರೆ, ತಥಾಕಥಿತ ಆಧುನಿಕತೆಯ ಹೆಸರಿನಲ್ಲಿ ಬೆಟ್ಟಗುಡ್ಡಗಳನ್ನು, ಕಾಡುಗಳನ್ನು ವ್ಯಾಪಿಸಿಕೊಂಡಿರುವ ನಾಗರಿಕತೆ ಪರಿಸರಕ್ಕೆ ಕೊನೆಯ ಆದ್ಯತೆ ನೀಡುತ್ತಿರುವ ಪರಿಣಾಮ ಹವಾಮಾನ ಬದಲಾವಣೆ/ಹವಾಮಾನ ವೈಪರೀತ್ಯದ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿವೆ. ಅಕಾಲಿಕ ಮಳೆ, ಪ್ರವಾಹ, ತೀವ್ರ ಸೆಕೆ, ಬರಗಾಲ ಹೀಗೆ ಹೊಸ ಸ್ವರೂಪದ ಸಮಸ್ಯೆಗಳು ಕಂಗೆಡಿಸುತ್ತಿದ್ದು, ಇವುಗಳ ತೀವ್ರತೆ ಈಗಾಗಲೇ ಅರಿವಿಗೆ ಬರುತ್ತಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಸೃಷ್ಟಿಸಿರುವ ಹಾನಿ ಅಷ್ಟಿಷ್ಟಲ್ಲ. ರೈತರ ಬೆಳೆ, ಬದುಕು ಮುಳುಗಿಹೋಗಿದ್ದು, ಶ್ರೀಸಾಮಾನ್ಯರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ರಾಜ್ಯದಲ್ಲಿ ನಾಲ್ಕು ದಿನ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇತ್ತೀಚೆಗೆ ಬಿಡುಗಡೆಗೊಂಡ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧ್ಯಯನ ವರದಿಯು ಹವಾಮಾನ ವೈಪರೀತ್ಯದ ಗಂಭೀರ ಮುಖಗಳನ್ನು ಅನಾವರಣಗೊಳಿಸಿದೆ. ಹವಾಮಾನ ಬದಲಾವಣೆಯಿಂದ ಕರ್ನಾಟಕದಲ್ಲಿ ಬರ, ಪ್ರವಾಹ, ಆಲಿಕಲ್ಲು ಮಳೆ, ಚಂಡಮಾರುತ, ಬಿಸಿಗಾಳಿ, ಗುಡುಗು, ಸಿಡಿಲು ಬೀಳುವ ಘಟನೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ. ಎರಡು ದಶಕಗಳಲ್ಲಿ ಕೆಲವೆಡೆ ವಿಪರೀತ ಮಳೆಯಾಗಿದ್ದರೆ, ಕೆಲ ಪ್ರದೇಶಗಳು ತೀವ್ರ ಬರಗಾಲ ಎದುರಿಸಿವೆ. ಕೊಡಗು, ಕಲಬುರಗಿ, ಯಾದಗಿರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ಇಳಿಕೆಯಾಗಿದೆ. ಮತ್ತೊಂದೆಡೆ, ಶಿವಮೊಗ್ಗ, ಹಾಸನ ಜಿಲ್ಲೆಯಲ್ಲಿ ಮಳೆಪ್ರಮಾಣ ಹೆಚ್ಚಿದೆ. ಈ ಬದಲಾವಣೆಗಳು ದಿಢೀರಾಗಿ ಘಟಿಸಿದ್ದೇನಲ್ಲ. ಪರಿಸರ ತಜ್ಞರು ಹಲವು ವರ್ಷಗಳಿಂದ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಮಳೆಚಕ್ರಗಳು ವ್ಯತ್ಯಾಸವಾದರೆ ತುಂಬ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿದ್ದರು. ಆದರೆ, ಹವಾಮಾನ ಬದಲಾವಣೆ ಮತ್ತು ಅದು ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ಜಾಗತಿಕ ರಂಗ ಇನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ವಿಪರ್ಯಾಸ.

ಗ್ಲಾಸ್ಗೊ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸಮಸ್ಯೆ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡಿದರಲ್ಲದೆ, ಪರಿಸರ ರಕ್ಷಣೆ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೋರುತ್ತಿರುವ ನಿರ್ಲಕ್ಷ್ಯವನ್ನೂ ಪ್ರಸ್ತಾಪಿಸಿದರು. ಆದರೂ, ಬಹುತೇಕ ದೇಶಗಳು ಹವಾಮಾನ ಬದಲಾವಣೆ ಸಮಸ್ಯೆಯನ್ನು ತಗ್ಗಿಸುವ ಬದ್ಧತೆ ವ್ಯಕ್ತಪಡಿಸಿಲ್ಲ. ಇದೇ ಸ್ಥಿತಿ ಮುಂದುವರಿದರೆ ಗತಿ ಏನು ಎಂಬ ಬಗ್ಗೆ ಜಾಗತಿಕ ನಾಯಕರು ಯೋಚಿಸಿದಂತಿಲ್ಲ. ಅವರವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಪ್ರಕೃತಿಯೇ ಮುನಿದು ಬಿಟ್ಟರೆ ಆಶ್ರಯ ಎಲ್ಲಿದೆ? ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಜವಾಬ್ದಾರಿಯನ್ನು ಸಾಮೂಹಿಕವಾಗಿ ಸ್ವೀಕರಿಸಬೇಕಿದೆ. ಇಲ್ಲದಿದ್ದಲ್ಲಿ ಸಾಮೂಹಿಕ ವಿನಾಶಕ್ಕೆ ಸಿದ್ಧವಾಗಬೇಕಾಗುತ್ತದೆ. ನಿಸರ್ಗಸ್ನೇಹಿ ಜೀವನಶೈಲಿಯತ್ತ ಹೊರಳಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net