

ಸಿರವಾರ (ರಾಯಚೂರು): ಮುಸ್ಲಿಂ ವ್ಯಕ್ತಿಯೊಬ್ಬ ತಮಾಷೆಗೆಂದು ಕೆರೆಗೆ ಕಲ್ಲೆಸೆದ ಘಟನೆ ಮತ್ತೊಂದು ತಿರುವು ಪಡೆದಿದ್ದು, ಇಡೀ ಕೆರೆಯ ನೀರನ್ನೇ ಗ್ರಾಮಸ್ಥರು ಖಾಲಿ ಮಾಡಿಸಿದ್ದಾರೆ!
ಗ್ರಾಮೀಣ ಪ್ರದೇಶಗಳಲ್ಲಿ ಸುಮ್ಮನೆ ಖಾಲಿ ತಿರುಗಾಡುವ ಕೆಲವು ವ್ಯಕ್ತಿಗಳು ಕೈಗೆ ಕಲ್ಲು ತೆಗೆದುಕೊಂಡು ಬಾವಿ, ಕೆರೆಗಳಿಗೆ ಎಸೆಯುವುದು ಮಾಮೂಲಿಯಾಗಿ ಕಂಡು ಬರುವ ದೃಶ್ಯ. ಆದರೆ ಈ ವ್ಯಕ್ತಿ ಕೆರೆಗೆ ಕಲ್ಲು ಎಸೆದಿದ್ದಕ್ಕೆ ಆಗಬಾರದ ಅವಾಂತರವೆಲ್ಲ ಆಗಿಹೋಗಿದೆ.
ತಾಲೂಕಿನ ಶಾಖಾಪುರದಲ್ಲಿ ಶುಕ್ರವಾರ ಬೆಳಗ್ಗೆ ಅತ್ತನೂರು ಗ್ರಾಮದ ಪಂಚಾಯಿತಿ ನೌಕರ ತಮಾಷೆಗೆಂದು ಕೆರೆಗೆ ಕಲ್ಲೆಸೆದಿದ್ದ. ಇದನ್ನು ದೂರದಿಂದ ಕೆಲವರು ಗಮನಿಸಿದ್ದರು. ಇದು ಮೊದಲೇ ಕರೊನಾ ಕಾಲ. ಯಾರು ಏನು ಮಾಡಿದರೂ ಅನುಮಾನದಿಂದ ನೋಡುವ ಸಮಯ. ಅದು ಹೇಳಿಕೇಳಿ ಕುಡಿಯುವ ನೀರಿನ ಕೆರೆ. ಜನ ಅಲ್ಲಿಂದಲೇ ನೀರು ತಂದು, ಅಡುಗೆ ಮಾಡುವುದಕ್ಕೂ ಬಳಸುತ್ತಾರೆ. ಆ ವ್ಯಕ್ತಿ ಕೆರೆಯಲ್ಲಿ ಕಲ್ಲೆಸೆದಿದ್ದರ ಹಿಂದೆಯೂ ಏನೋ ಮಸಲತ್ತು ಅಡಗಿದೆ ಎಂದು ಭಾವಿಸಿದ ಕೆಲವರು, ಆತ ಕಲ್ಲಿಗೆ ತನ್ನ ಎಂಜಲು ಹಚ್ಚಿ ಕೆರೆಗೆ ಎಸೆದಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದರು.
ಈ ವದಂತಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ, ಗ್ರಾಮಸ್ಥರು ತಮ್ಮ ಮನೆಗಳಲ್ಲಿ ತಂದಿಟ್ಟ ನೀರು ಅದೇ ಕೆರೆಯದ್ದಾದ್ದರಿಂದ ಅದರಲ್ಲೂ ಕರೊನಾ ಸೋಂಕು ಇರಬಹುದೆಂದು ಹೆದರಿ ತುಂಬಿಟ್ಟ ನೀರನ್ನೆಲ್ಲ ರಸ್ತೆಗೆ ಚೆಲ್ಲಿದ್ದರು. ಅಷ್ಟೇ ಅಲ್ಲ, ಆ ನೀರಿನಿಂದ ಮಾಡಿದ್ದ ಅಡುಗೆಯನ್ನೂ ಚೆಲ್ಲಿದ್ದರು! ಕೊನೆಗೆ ವಿಷಯ ಪೊಲೀಸರಿಗೆ ಗೊತ್ತಾಗಿ, ಆ ಮುಸ್ಲಿಂ ವ್ಯಕ್ತಿಯನ್ನು ಶನಿವಾರ ಬೆಳಗ್ಗೆ ಗ್ರಾಮಕ್ಕೆ ಕರೆಸಿ, ಜನರೆದುರೇ ಆತನಿಗೆ ಕೆರೆಯ ನೀರು ಕುಡಿಯುವಂತೆ ತಿಳಿಸಿದ್ದರು. ಆತ ನಿರಾಳವಾಗಿ ಆ ನೀರು ಕುಡಿದಿದ್ದ. ತಾನು ಅಂತಹ ಯಾವುದೇ ದುರುದ್ದೇಶದ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟಪಡಿಸಿದ್ದ. ಆಗ ಗ್ರಾಮಸ್ಥರಲ್ಲಿದ್ದ ಅನುಮಾನ ಬಗೆಹರಿದಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಅದು ಹುಸಿಯಾಗಿದೆ. ಭಾನುವಾರ ಗ್ರಾಮ ಪಂಚಾಯಿತಿ ಮೂಲಕ ಇಡೀ ಕೆರೆಯ ನೀರನ್ನು ಪಂಪ್ಸೆಟ್ ಮೂಲಕ ಖಾಲಿ ಮಾಡಿಸಿದ್ದಾರೆ. ಇದೀಗ ಗ್ರಾಮಸ್ಥರು ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ! ಈ ಕುರಿತು ಅತ್ತನೂರು ಗ್ರಾಪಂ ಪಿಡಿಒ ವಿಜಯಕುಮಾರ ಹೇಳುವುದೇ ಬೇರೆ. ‘ಕೆರೆ ನೀರು ಮಲಿನವಾಗಿದ್ದರಿಂದ ಖಾಲಿ ಮಾಡಿಸಲಾಗಿದೆ. ಹೂಳು ಎತ್ತಲಾಗಿದೆ. ಮತ್ತೆ ನೀರನ್ನು ತುಂಬಿಸಲಾಗುವುದು’ ಎಂಬುದು ಅವರ ಸಮಜಾಯಿಷಿ.