

ವಾರಣಾಸಿ: ಕಾಶಿಯಲ್ಲಿರುವ ಪುರಾತನ ಕರ್ನಾಟಕ ಛತ್ರವನ್ನು 5ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಮುಂದಾಗಿದೆ. ಇತ್ತೀಚೆಗೆ ಕಾಶಿಗೆ ಭೇಟಿ ನೀಡಿದ್ದ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಛತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಕಾಶಿ ಗಂಗಾನದಿ ದಂಡೆಯಲ್ಲಿರುವ ಪ್ರಸಿದ್ಧ ಹರಿಶ್ಚಂದ್ರ ಘಾಟ್ ಪಕ್ಕದಲ್ಲೇ ಇರುವ ಕರ್ನಾಟಕ ಭವನದ ಕಟ್ಟಡವು 1927ರಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ್ದರು. ಒಂದು ಶತಮಾನ ಕಂಡಿರುವ ಕಟ್ಟಡವು ಕರ್ನಾಟಕ ಸರ್ಕಾರದ ಅಧೀನದಲ್ಲೇ ನಿರ್ವಹಣೆಯಾಗುತ್ತಿದ್ದು, ಸರ್ಕಾರ ನೂತನ ಕಟ್ಟಡ ನಿರ್ಮಿಸಿದೆಯಾದರೂ ಹಳೇಯ ಕಟ್ಟಡ ಸ್ಪಲ್ಪಮಟ್ಟಿಗೆ ಶಿಥಿಲವಾಗಿರುವುದನ್ನು ಮನಗಂಡ ಸಚಿವರು ಕೂಡಲೇ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆಗೊಳಿಸಿದ್ದಾರೆ.
ಕಾಶೀ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಕರ್ನಾಟಕದಿಂದ ವರ್ಷಪೂರ್ತಿ ಯಾತ್ರಿಗಳು ಕ್ಷೇತ್ರಕ್ಕೆ ಹೋಗುತ್ತಾರೆ. ಹೀಗೆ ಹೋಗುವ ಭಕ್ತರಿಗೆ ಕರ್ನಾಟಕ ಭವನದಿಂದ ಉತ್ತಮ ಸೇವೆ ದೊರೆಯಬೇಕೆಂಬ ಕಾರಣಕ್ಕೆ ಸರ್ಕಾರ ಭವನ ನವೀಕರಣಕ್ಕೆ ಮುಂದಾಗಿದೆ.
ಇದೇ ವೇಳೆ ಮುಂದಿನ ಜನವರಿಯಲ್ಲಿ ಕಾಶೀ ಸಮೀಪದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಜಗತ್ತಿನ ಬೃಹತ್ ಧಾರ್ಮಿಕ ಕಾರ್ಯಕ್ರಮವಾಗಿರುವ ಕುಂಭಮೇಳ ನಡೆಯಲಿದ್ದು, ಆಗಮಿಸುವ ಕನ್ನಡಿಗರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕಾಶೀ ಜಂಗಮವಾಡಿ ಮಠ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ಆ ಕಾರ್ಯಕ್ಕೂ ಅನುದಾನ ಒದಗಿಸುವಂತೆ ಕಾಶೀ ಪೀಠ ಮನವಿ ಮಾಡಿದೆ.