ಬುಟ್ಟಿಗೆ ಹಸೆ ಚಿತ್ತಾರದ ಸೊಬಗು

sor Bhoomi hunnime
ಸೊರಬ ತಾಲೂಕಿನ ಕಕ್ಕರಸಿ ಗ್ರಾಮದ ದೇವಮ್ಮ ಮತ್ತು ಗಂಗಮ್ಮ ಹಸೆ ಚಿತ್ತಾರ ಬರೆಯುತ್ತಿರುವುದು.
Published on

ಸೊರಬ: ತಾಲೂಕಿನಾದ್ಯಂತ ಭೂಮಿ ಹುಣ್ಣಿಮೆ ಅಂಗವಾಗಿ ರೈತರ ಮನೆಗಳಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಭೂತಾಯಿ ಬಯಕೆ ತೀರಿಸಲು ವೈವಿಧ್ಯಮಯ ತಿಂಡಿ ತಿನಿಸುಗಳನ್ನು ತಯಾರಿಸಿ, ಭೂಮಣ್ಣಿ ಬುಟ್ಟಿ ಹಾಗೂ ಪೂಜಾ ಪರಿಕರಗಳನ್ನು ಜೋಡಿಸಿಕೊಂಡಿದ್ದಾರೆ.

ಬೆಳೆದು ನಿಂತ ಪೈರಿಗೆ ಹಬ್ಬದಲ್ಲಿ ಚರುಗ ಚೆಲ್ಲುವುದು ವಿಶೇಷ. ಚರುಗ ತುಂಬಿಕೊಂಡು ಹೋಗಲು ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಮನೆತನ ಒಂದೊಂದು ರೀತಿ ಸಂಪ್ರದಾಯ ಆಚರಿಸಿಕೊಂಡು ಬಂದಿವೆ. ಹಸೆ ಚಿತ್ತಾರದ ಕಲೆ ಕರಗತ ಮಾಡಿಕೊಂಡ ಮಹಿಳೆಯರು ಬುಟ್ಟಿಗೆ ಚಿತ್ತಾರ ಬರೆಯುತ್ತಾರೆ.
ತಾಲೂಕಿನ ಕಕ್ಕರಸಿ, ಮುಟುಗುಪ್ಪೆ, ಕಡಸೂರು, ಬಂದಿಗೆ, ಹರಳಿಗೆ, ತಟ್ಟಿಕೆರೆ ಮುಂತಾದೆಡೆ ಬುಟ್ಟಿಗಳ ಮೇಲೆ ವಿಶೇಷ ಹಸೆ ಚಿತ್ತಾರಗಳನ್ನು ಬರೆಯುತ್ತಾರೆ. ಕಕ್ಕರಸಿ ಗ್ರಾಮದ ಹಿರಿಯರಾದ ದೇವಮ್ಮ ಮತ್ತು ಗಂಗಮ್ಮ ಹಸೆ ಚಿತ್ತಾರದ ಕಲೆ ಮೈಗೂಡಿಸಿಕೊಂಡು ಇತರರಿಗೆ ಪ್ರೇರಣೆಯಾಗಿದ್ದಾರೆ. ಈ ರೀತಿ ಗ್ರಾಮೀಣ ಮಹಿಳೆಯರು ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಜೀವಂತ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬುಟ್ಟಿಗೆ ಸಗಣಿ, ಕೆಮ್ಮಣು ಹಚ್ಚಿ ಒಣಗಿಸಿ, ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ರೈತರು, ವಧು-ವರರ, ಎತ್ತುಗಳ ಚಿತ್ತಾರವನ್ನು ಬಿಡಿಸುತ್ತಾರೆ. ಪಟ್ಟಣದಲ್ಲಿ ಭೂಮಿ ಹುಣ್ಣಿಮೆಗೆ ಬೇಕಾದ ಹಚ್ಚಂಬಲಿ ತಯಾರಿಸಲು ಕುಂಬಳಕಾಯಿ, ಹೀರೆಕಾಯಿ, ಸೊಪ್ಪು, ಗೆಡ್ಡೆ ಗೆಣಸುಗಳ ಖರೀದಿ ಮಾಡಿದರು.
ಭೂಮಿ ಹುಣ್ಣಿಮೆ ಎಂದರೆ ರೈತರಲ್ಲಿ ಒಂದು ವಿಶೇಷ ಹಾಗೂ ಸಂಭ್ರಮ. ಭೂತಾಯಿ ಬಯಕೆ ತೀರಿಸಲು ವೈವಿಧ್ಯಮಯ ತಿಂಡಿ ತಿನಿಸುಗಳ ಬುಟ್ಟಿ ತೆಗೆದುಕೊಂಡು ಹೋಗುವುದು ಸಾಂಪ್ರದಾಯ. ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಕಲಿತ ನಾವು ಈಗ ಮುಂದುವರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ದೇವಮ್ಮ ಮತ್ತು ಗಂಗಮ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net