ಬಿಹಾರ ಡಿಸಿಎಂ ವಿಜಯ್ ಕುಮಾರ್ ಸಿನ್ಹಾಗೆ ಚುನಾವಣಾ ಆಯೋಗದಿಂದ ನೋಟಿಸ್​ ಜಾರಿ | The Election Commission

Vijaykumar sinha
Published on

The Election Commission: ಎರಡು ಮತದಾರರ ಚೀಟಿಗಳನ್ನು ಹೊಂದಿದ್ದು, ಎರಡು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡ ಆರೋಪದ ಮೇಲೆ ಹಿರಿಯ ಬಿಜೆಪಿ ನಾಯಕ ಮತ್ತು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಚುನಾವಣಾ ಆಯೋಗ ಭಾನುವಾರ ನೋಟಿಸ್ ಜಾರಿ ಮಾಡಿದೆ.

ಬಿಹಾರದಲ್ಲಿ ಚುನಾವಣೆ ನಡೆಯಲಿರುವ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸುತ್ತಲಿನ ವಿವಾದದ ನಡುವೆಯೇ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಉಪಮುಖ್ಯಮಂತ್ರಿ ಸಿನ್ಹಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ, ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನಂತರ ಚುನಾವಣಾ ಆಯೋಗವು ಈ ಕ್ರಮ ಕೈಗೊಂಡಿದೆ.

ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಆರೋಪದ ಮೇಲೆ ಸಿನ್ಹಾ ಅವರಿಗೆ ನೋಟಿಸ್ ನೀಡಲಾಗಿದೆ. ಅವರಿಗೆ ಎರಡು ಮತದಾರರ ಗುರುತಿನ ಚೀಟಿಗಳು ಏಕೆ ಇವೆ ಎಂಬುದಕ್ಕೆ ಉತ್ತರಿಸಲು ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ಪ್ರಕರಣದ ಹಿನ್ನಲೆ

ಭಾನುವಾರ (ಆಗಸ್ಟ್ 10) ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಾದವ್, ವಿಜಯ್ ಕುಮಾರ್ ಸಿನ್ಹಾ ಎರಡು ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಮತದಾರರಾಗಿದ್ದಾರೆ. ಅವರ ಹೆಸರು ಲಖಿಸರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೆ ಎಂದಿದ್ದರು.

ಬಿಹಾರದಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (SIR) ಮಾಡಿದ ನಂತರ ಇದು ಸಂಭವಿಸಿರುವುದರಿಂದ ಇದಕ್ಕೆ ಚುನಾವಣಾ ಆಯೋಗ ಜವಾಬ್ದಾರಿಯೋ? ಅಥವಾ ಸಿನ್ಹಾ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೋ? ಬಹಿರಂಗಪಡಿಸುವಂತೆ ಆಗ್ರಹಿಸಿದ್ದರು ಮತ್ತು ಡಿಸಿಎಂ ಸಿನ್ಹಾ ಅವರ ರಾಜೀನಾಮೆಗೆ ತೇಜಸ್ವಿ ಒತ್ತಾಯಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net