

- ಕಿರುವಾರ ಎಸ್.ಸುದರ್ಶನ್ ಕೋಲಾರ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ ಕಾರ್ಯ ಶಿಕ್ಷಕರಿಗೆ ಭಾರವಾಗಿ ಪರಿಣಮಿಸಿದೆ.
ಕೋಲಾರ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ಒಟ್ಟು 93,875 ಮಕ್ಕಳಿದ್ದಾರೆ. ಆ ಪೈಕಿ 82,552 ಮಕ್ಕಳು ಮೊಟ್ಟೆ ಸೇವಿಸುತ್ತಿದ್ದಾರೆ. ಮೊಟ್ಟೆ ಸೇವಿಸದ 10,117 ವಿದ್ಯಾರ್ಥಿಗಳಿಗೆ ಶೇಂಗಾ, ಚಿಕ್ಕಿ ಮತ್ತು ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯೋಜನೆಯ ಸಾಧನೆ ಶೇ.98.72 ಆಗಿದೆ.
ರಾಜ್ಯ ಸರ್ಕಾರವು ಶಾಲೆಗಳ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ, ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ನೀಡುತ್ತಿದೆ. ಹಿಂದೆ ವಾರದಲ್ಲಿ ಎರಡು ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಅಜೀಂ ಪ್ರೇಮ್ ಜೀಫೌಂಡೇಷನ್ ಸರ್ಕಾರದ ಜತೆ ಕೈ ಜೋಡಿಸಿದ ನಂತರ ವಾರದ ನಾಲ್ಕು ದಿನ -ಫೌಂಡೇಷನ್ ಮತ್ತು ಎರಡು ದಿನ ರಾಜ್ಯ ಸರ್ಕಾರವು ಯೋಜನೆಯ ಮೊತ್ತ ಭರಿಸುತ್ತಿದೆ. ಆ ಮೂಲಕ ವಾರದ 6 ದಿನಗಳೂ ವಿದ್ಯಾರ್ಥಿಗಳಿಗೆ ಮೊಟ್ಟೆ ಭಾಗ್ಯ ದೊರೆಯುವಂತಾಗಿದೆ.
ಸರ್ಕಾರ ಪ್ರತಿ ಮೊಟ್ಟೆಗೆ 6 ರೂ. ನೀಡುತ್ತದೆ. ಅದರಲ್ಲಿ ಮೊಟ್ಟೆ ಖರೀದಿಗೆ 5.20 ಪೈ ಮೊಟ್ಟೆ ಸುಲಿಯಲು 30 ಪೈಸೆ ಮತ್ತು ಬೇಯಿಸಲು ಗ್ಯಾಸ್ ವೆಚ್ಚ ಎಂದು 50 ಪೈಸೆ ಹಂಚಿಕೆ ಮಾಡಲಾಗುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಸರ್ಕಾರ ನೀಡುತ್ತಿರುವ ಮೊತ್ತಕ್ಕೆ ಮೊಟ್ಟೆ ಸಿಗುತ್ತಿಲ್ಲ. ಚಳಿಗಾಲದಲ್ಲಿ ಮೊಟ್ಟೆ ದರವು 6 ರೂ. ಗಿಂತ ಹೆಚ್ಚಾಗಿದೆ. ಸರ್ಕಾರ ನೀಡುತ್ತಿರುವ 5.20 ಬೆಲೆಗೆ ಮೊಟ್ಟೆ ಖರೀದಿ ಶಿಕ್ಷಕರಲ್ಲಿ ತಲೆಬೇನೆ ತರಿಸಿದೆ.
ಗ್ರಾಮೀಣ ಭಾಗದಲ್ಲಿ ಕೆಲ ಶಾಲೆಗಳ ಶಿಕ್ಷಕರು ಸ್ಥಳೀಯವಾಗಿಯೇ ಮೊಟ್ಟೆ ಖರೀದಿಸುತ್ತಿದ್ದರೆ, ನಗರ, ಪಟ್ಟಣದಲ್ಲಿರುವ ಶಾಲಾ ಶಿಕ್ಷಕರು ಅಂಗಡಿಯಿAದ ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಾಗಿರುವುದರಿಂದ 5.20ಗೆ ಮಾರಾಟಗಾರರು ಮೊಟ್ಟೆ ನೀಡುತ್ತಿಲ್ಲ. ಉಳಿದ ಹಣವನ್ನು ನಾವೇ ಭರಿಸುವಂತಾಗುತ್ತಿದ್ದು, ಹೊರೆಯಾಗುತ್ತಿದೆ ಎಂಬುದು ಶಿಕ್ಷಕರ ಅಳಲು.
ಚಳಿಗಾಲದಲ್ಲಿ ಸಹಜವಾಗಿಯೇ ಕೋಳಿ ಮೊಟ್ಟೆ ಇಳುವರಿ ಕುಂಠಿತವಾಗುತ್ತದೆ. ಇದರಿಂದ ಸಹಜವಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತದೆ. ಚಳಿಗಾಲದಲ್ಲಿ ಕೋಳಿಗಳಿಗೆ ಆರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದರಿಂದ ಆರೋಗ್ಯ ಕಾಪಾಡುವುದು ಮಾಲೀಕರಿಗೆ ಮುಖ್ಯವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಪ್ರತಿ ಚಳಿಗಾಲದಲ್ಲಿ ಮೊಟ್ಟೆಗಳ ದರ ಹೆಚ್ಚುತ್ತದೆ. ಸರ್ಕಾರ ಇದನ್ನು ಗಮನಿಸಬೇಕಿದೆ.
* ಪೂರ್ಣ ಪ್ರಮಾಣದ ಹಣ ಬಿಡುಗಡೆಗೆ ಒತ್ತಾಯ
ಶಾಲೆಗೆ ದಾಖಲಾಗಿರುವ ಮಕ್ಕಳ ಪೈಕಿ ಬಹುತೇಕ ಮಕ್ಕಳು ಮೊಟ್ಟೆ ಸೇವನೆ ಮಾಡುತ್ತಾರೆ. ಆದರೆ ಮೊಟ್ಟೆಗೆ ಬಿಡುಗಡೆ ಆಗುತ್ತಿರುವ ಹಣ ಕಡಿಮೆ ಇದೆ. ಇದರಿಂದ ಮೊಟ್ಟೆ ಖರೀದಿಗೆ ಅಗತ್ಯವಿರುವ ಪೂರ್ಣ ಪ್ರಮಾಣದ ಹಣ ಹೊಂದಿಸುವುದೇ ಶಿಕ್ಷಕರ ಕೆಲಸವಾಗಿದ್ದು, ಇದು ಹೊರೆಯಾಗುತ್ತಿದೆ. ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿಗೆ ತಗಲುವ ವೆಚ್ಚ ಕಡಿಮೆ. ಇವುಗಳಿಂದ ಉಳಿಕೆಯಾಗುವ ಹಣವನ್ನು ಮೊಟ್ಟೆ ಖರೀದಿಗೆ ಭರಿಸುತ್ತಿದ್ದೇವೆ. ಆದರೆ ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ತಿನ್ನುವ ಮಕ್ಕಳು ತೀರಾ ಕಡಿಮೆ ಸಂಖೆ್ಯ ಇದ್ದು, ಸರ್ಕಾರ ಮೊಟ್ಟೆ ಖರೀದಿಗೆ ಹೆಚ್ಚಿನ ಹಣ ನೀಡಬೇಕು. ಇಲ್ಲವೆ ಪಂಚಾಯಿತಿಯವರಿಗೆ ಈ ಜವಾಬ್ದಾರಿ ವಹಿಸಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ.
* ಕಾಲಕ್ಕೆ ತಕ್ಕಂತೆ ಬೆಲೆ ನಿಗದಿಪಡಿಲಿ
ಸರ್ಕಾರ ಯೋಜನೆ ರೂಪಿಸುವಾಗ ಆಯಾ ಸಂದರ್ಭಕ್ಕೆ ಅನುಸಾರವಾಗಿ ಅಥವಾ ಕನಿಷ್ಠ ಒಂದು ತಿಂಗಳ ಬೆಲೆಯ ಏರಿಳಿತಕ್ಕೆ ಅನುಗುಣವಾಗಿ ಮೊಟ್ಟೆಯ ಬೆಲೆ ನಿಗದಿಪಡಿಸದಿದ್ದರೆ ಶಿಕ್ಷಕರು ವೇತನಕ್ಕೆ ಕೊಳ್ಳಿ ಇಟ್ಟುಕೊಳ್ಳುವ ಆತಂಕ ಮನೆ ಮಾಡಿದೆ. ಚಳಿಗಾಲ, ಬೇಸಿಗೆ ಕಾಲಕ್ಕೆ ತಕ್ಕಂತೆ ಮೊಟ್ಟೆ ಬೆಲೆ ಏರಿಳಿತವಾಗುತ್ತದೆ. ಹೀಗೆ ಮೊಟ್ಟೆಯ ದರವು ಆಗಾಗ ಬದಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ 6.70 ರೂ.ಗೆ ಏರಿದೆ. ಸರ್ಕಾರ 5.20 ರೂ. ಕೊಟ್ಟರೆ ಹೆಚ್ಚುವರಿ ಮೊತ್ತ ಭರಿಸುವುದು ಕಷÀ್ಟ. ಎಸ್‌ಡಿಎಂಸಿ ಎಷ್ಟು ಬಾರಿ ಕೈಯಿಂದ ಭರಿಸಲು ಸಾಧ್ಯ ಎಂದು ಮುಖ್ಯ ಶಿಕ್ಷಕರೊಬ್ಬರು ಅಲವತ್ತುಕೊಂಡಿದ್ದಾರೆ.
ಕೋಟ್...
ಮೊಟ್ಟೆ ದರವು ಹೆಚ್ಚಾಗಿದ್ದರಿಂದ ಖರೀದಿ ಮಾಡಲು ಹೆಚ್ಚು ಹಣ ವ್ಯಯವಾಗುವ ಬಗ್ಗೆ ಇಲಾಖೆಯ ಆಯುಕ್ತರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
- ಬಿ.ಶಿವಕುಮಾರ್, ಉಪಕಾರ್ಯದರ್ಶಿ, ಜಿ.ಪಂ, ಕೋಲಾರ.