

ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಗದಗ ಮೂಲದ ಬಸವರಾಜು ಬಂಧಿತ. ಕ್ಯಾಬ್ ಓಡಿಸಿಕೊಂಡು ಮಲ್ಲೇಶ್ವರದಲ್ಲಿ ಬಸವರಾಜು ನೆಲೆಸಿದ್ದ. ಬುಧವಾರ ಬೆಳಗ್ಗೆ 11 ಗಂಟೆಲ್ಲಿ ಎಂದಿನಂತೆ ಕ್ಯಾಬ್ ಓಡಿಸುತ್ತಿದ್ದಾಗ ಬೆಳ್ಳಂದೂರು ಸಮೀಪದ ಬೋಗನಹಳ್ಳಿ ಖಾಸಗಿ ಅಪಾರ್ಟ್‌ಮೆಂಟ್ ಬಳಿಗೆ ಪ್ರಯಾಣಿಕರನ್ನು ಪಿಕ್ ಮಾಡಲು ಹೋಗಿದ್ದಾನೆ. ಅದೇ ವೇಳೆ ಅಪಾರ್ಟ್‌ಮೆಂಟ್ ನಿವಾಸಿಯಾದ ವಿನಿತಾ ಅಗರ್‌ವಾಲ್, ಕ್ಯಾಬ್ ಏರಿ 100 ಮೀಟರ್ ಸಾಗಿದ್ದು, ಚಾಲಕ ಓಟಿಪಿ ಕೇಳಿದ್ದಾನೆ. ಓಟಿಪಿ ಹೇಳಿದಾಗ ಇದು ನೀವು ಬುಕ್ ಮಾಡಿರುವ ಕ್ಯಾಬ್ ಅಲ್ಲ. ಕೆಳಗೆ ಇಳಿಯಿರಿ ಎಂದು ಚಾಲಕ ಹೇಳಿದ್ದಾನೆ.
ಆಗ ವಿನಿತಾ ಮತ್ತು ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಳಗೆ ಇಳಿದ ವಿನಿತಾ, ಕಾರಿನ ಡೋರ್‌ನ್ನು ಜೋರಾಗಿ ಹಾಕಿದಾಗ ಕುಪಿತಗೊಂಡ ಚಾಲಕ,ಜಗಳ ಮಾಡಿ ಕಪಾಳಕ್ಕೆ ಹೊಡೆದಿದ್ದಾನೆ. ಜಗಳ ತಾರಕಕ್ಕೆ ಏರಿದಾಗ ಅಕ್ಕಪಕ್ಕದ ನಿವಾಸಿಗಳು ಬಂದು ಶಾಂತಗೊಳಿಸಿದ್ದಾರೆ. ಈ ಬಗ್ಗೆ ವಿನಿತಾ, ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಗಿಳು ತಿಳಿಸಿದ್ದಾರೆ.