

ಶಿಕಾರಿಪುರ: ವೈದ್ಯರೆಂದರೆ ನಮಗೆ ಮರುಜೀವ ಕೊಡುವ ಭಗವಂತನ ಸ್ವರೂಪ. ಆದ್ದರಿಂದಲೇ ನಾವು ವೈದ್ಯೋ ನಾರಾಯಣ ಹರಿ ಎಂದು ಗೌರವಿಸುತ್ತೇವೆ ಎಂದು ರೋಟರಿ ಶಿಕಾರಿಪುರ ಕದಂಬ ಅಧ್ಯಕ್ಷ ಶಿವಮೂರ್ತಿ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ಪಟ್ಟಣದ ಹಿರಿಯ ವೈದ್ಯ ಎಚ್.ಶಿವಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಅನಾರೋಗ್ಯ ಉಂಟಾದಾಗ ಜಗತ್ತೇ ನಶ್ವರ ಎನಿಸುತ್ತದೆ. ಆಗ ನಮಗೆ ಭಗವದ್ ಸ್ವರೂಪದಲ್ಲಿ ಬಂದು ಚಿಕಿತ್ಸೆ ಮೂಲಕ ಜೀವದಾನ ಮಾಡುವವರೇ ವೈದ್ಯರು ಎಂದರು.
ಕಾರ್ಯದರ್ಶಿ ಡಾ. ವೀರೇಂದ್ರ ಮಾತನಾಡಿ, ಜಾತಿ, ಮತ, ಪಂಥ, ಮೇಲು-ಕೀಳು ಎಂಬ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಶಕ್ತಿಮೀರಿ ಪ್ರಯತ್ನ ಮಾಡಿ ರೋಗಿಗಳನ್ನು ಉಳಿಸುವ ಅವರನ್ನು ಸನ್ಮಾನಿಸುವುದು ಒಳ್ಳೆಯ ಕಾರ್ಯ ಎಂದು ತಿಳಿಸಿದರು.
ಡಾ. ಸಂತೋಷ, ಡಾ. ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಂ.ಆರ್.ರಘು, ಹರೀಶ್, ಸಿದ್ದಣ್ಣ ಇದ್ದರು.