

ಬೆಂಗಳೂರು: ಕೇಂದ್ರದ ಲಾಕ್ಡೌನ್ ಮಾರ್ಗಸೂಚಿಗಳನ್ವಯ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವುದಕ್ಕೆ ನಾಲ್ಕು ವಲಯಗಳಾಗಿ ವಿಂಗಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಜತೆಗಿನ ಸಭೆಯ ನಂತರ ಮಾತನಾಡಿ, ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಆರ್ಥಿಕ ಚಟುವಟಿಕೆಗಳು ನಡೆಯಲೇಬೇಕಾಗುತ್ತದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಂಟೇನ್ಮೆಂಟ್ ಝೋನ್ಗಳನ್ನು ಮಾತ್ರ ಕೆಂಪು ವಲಯವನ್ನಾಗಿ ಉಳಿಸಿ, ಇತರೆಡೆ ಚಟುವಟಿಕೆಗಳನ್ನು ಮರು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ಅಭಿಪ್ರಾಯ ನೀಡಲಿದ್ದಾರೆ ಎಂದರು.
ಕೆಂಪು ವಲಯ ಸೇರಿ ಎಲ್ಲೆಡೆ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಕಾರ್ಖಾನೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲಾಧಿಕಾರಿಯ ಅನುಮತಿ ಪಡೆದು ಚಟುವಟಿಕೆ ಆರಂಭಿಸಬೇಕು. ಕೇವಲ ಎರಡು ಗಂಟೆಗಳಲ್ಲಿ ಅನುಮತಿ ಪಡೆಯಬಹುದಾಗಿದೆ ಎಂದರು. ವೋಲ್ವೋ ಕಾರ್ಖಾನೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಕಾರ್ಖಾನೆಗಳಲ್ಲಿ ಶೇಕಡ 33 ಕಾರ್ವಿುಕರು ಮಾತ್ರ ಇರಬೇಕು. ಷರತ್ತು ಬದ್ಧವಾಗಿ ಮಾರುಕಟ್ಟೆಗಳನ್ನು ತೆರೆಯಲು ತೀರ್ಮಾನ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಔಷಧ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಸ್ಯಾನಿಟರಿ, ಟೈಲ್ಸ್, ಗ್ರಾನೈಟ್, ಸಿಮೆಂಟ್, ಕಬ್ಬಿಣ, ಸುಣ್ಣ, ಬಣ್ಣದ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲ ದಿನ 51 ಸಾವಿರ ರೂ. ದಂಡ ವಸೂಲಿ
ನಗರದಲ್ಲಿ ಕರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಸಂಚಾರ ಮಾಡಿದ 86 ಜನರಿಂದ 51,700 ರೂ. ದಂಡ ಸಂಗ್ರಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಸಂಚಾರ ಮಾಡುವವರು, ಕಂಡಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಹಾಗೂ ಕಸ ಹಾಕುವುದು ಕಂಡುಬಂದರೆ 1 ಸಾವಿರ ರೂ. ದಂಡ ವಿಧಿಸುವ ಆದೇಶವನ್ನು ಮೇ 1 (ಶುಕ್ರವಾರ) ರಿಂದ ಜಾರಿಗೊಳಿಸಲಾಗಿದೆ. ಮೊದಲ ದಿನ 4 ಪ್ರಕರಣಗಳಿಂದ 2,600 ರೂ. ಸಂಗ್ರಹಿಸಿದ್ದ ಬಿಬಿಎಂಪಿ ಮಾರ್ಷಲ್ಗಳು, ಶನಿವಾರ 86 ಪ್ರಕರಣಗಳಿಂದ 51,700 ರೂ. ದಂಡ ಸಂಗ್ರಹಿಸಿದ್ದಾರೆ.
ಕಂಟೇನ್ವೆುಂಟ್ನಲ್ಲಿ ಸಡಿಲಿಕೆಯಿಲ್ಲ
ಬೆಂಗಳೂರು: ಮಹಾನಗರದಲ್ಲಿ 25 ಕಂಟೇನ್ವೆುಂಟ್ ವಾರ್ಡ್ಗಳ ನಿರ್ಬಂಧಗಳನ್ನು ಯಾವುದೇ ಕಾರಣಕ್ಕೂ ಸಡಿಲಿಕೆ ಮಾಡುವುದಿಲ್ಲ. ಇಲ್ಲಿ ಮದ್ಯ ಮಾರಾಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ವಿಸ್ತರಣೆ ಹಾಗೂ ಸಡಿಲಿಕೆ ಕುರಿತು ಮಾರ್ಗಸೂಚಿಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಗುರುತಿಸಲಾದ ಪಟ್ಟಿಯಲ್ಲಿ ಬೆಂಗಳೂರು ನಗರ ಕೆಂಪು ವಲಯದಲ್ಲಿದ್ದು, ಇಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಗರದ 198 ವಾರ್ಡ್ಗಳಿದ್ದು, ಅದರಲ್ಲಿ ಕರೋನಾ ಸೋಂಕು ಪ್ರಕರಣ ಪತ್ತೆಯಾಗದ 154 ವಾರ್ಡ್ಗಳನ್ನು ಹಸಿರು ವಲಯವೆಂದು ಪರಿಗಣಿಸಲಾಗಿದೆ ಎಂದು ಶನಿವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಕಂಟೇನ್ವೆುಂಟ್ನಲ್ಲಿ ಮದ್ಯಕ್ಕೆ ನಿರ್ಬಂಧ: ನಗರದಲ್ಲಿ 28 ದಿನಗಳಿಂದೀಚೆಗೆ ಸೋಂಕಿತರು ಕಂಡುಬಂದಿರುವ 25 ವಾರ್ಡ್ಗಳಲ್ಲಿ ಕಂಟೈನ್ವೆುಂಟ್ ಸೀಲ್ ಮಾಡಲಾಗಿದೆ. ಇಲ್ಲಿ ಮನೆಯಿಂದ ಜನರು ಹೊರ ಬರಲು ಅವಕಾಶವಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಒಂದು ವೇಳೆ ಸರಬರಾಜು ಮಾಡುವುದು ಕಂಡುಬಂದರೆ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ದಂಡಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಸಿರು ವಲಯದಲ್ಲಿ ಅಗತ್ಯ ಚಟುವಟಿಕೆಗಳಿಗೆ ವಿನಾಯಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ವರ್ಣವಾರು ವಾರ್ಡ್ ವಿಂಗಡಣೆ
ರಾಜಧಾನಿಯ 198 ವಾರ್ಡ್ಗಳನ್ನು ವಿವಿಧ ವಲಯಗಳನ್ನಾಗಿ ಗುರುತಿಸ ಲಾಗಿದ್ದು, ರಾಜ್ಯದ ಸಡಿಲಿಕೆ ನಿಯಮಗಳು ವಲಯವಾರು ಅನ್ವಯವಾಗಲಿವೆ. 2 ವಾರ್ಡ್ ಕೆಂಪು ವಲಯಕ್ಕೆ ಸೇರಿದ್ದರೆ, 173 ವಾರ್ಡ್ಗಳನ್ನು ಹಸಿರು ವಲಯಕ್ಕೆ ಸೇರಿಸಲಾಗಿದೆ
ರಾಜ್ಯದಲ್ಲಿ ಲಾಕ್ಡೌನ್ 3.0 ಸಡಿಲಿಕೆ ಸೋಮವಾರ ಆರಂಭವಾಗಲಿದ್ದು, ಅದಕ್ಕೆ ಅನ್ವಯವಾಗುವಂತೆ 4 ಬಣ್ಣಗಳಲ್ಲಿ ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಹಸಿರು ವಲಯಗಳಿಗೆ ಪ್ರತ್ಯೇಕ ಲಾಕ್ಡೌನ್ ಸಡಿಲಿಕೆ ಅನ್ವಯವಾಗಲಿವೆ. ಪಾದರಾಯನಪುರ ಮತ್ತು ಹೊಂಗಸಂದ್ರದಲ್ಲಿ ವಾರ್ಡ್ಗಳಲ್ಲಿ ಅತಿಹೆಚ್ಚು ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಕಾರಣ ಇವುಗಳನ್ನು ಕೆಂಪು ವಲಯ ಹಾಗೂ ಕಂಟೇನ್ವೆುಂಟ್ ವಲಯ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇನ್ನು ಕರೊನಾ ಸೋಂಕಿತರು ಕಂಡುಬಾರದ ಹಾಗೂ ಈಗಾಗಲೇ ಸೋಂಕಿತರು ಗುಣಮುಖರಾಗಿ 28 ದಿನ ಕಳೆದ ವಾರ್ಡ್ಗಳನ್ನು ಹಸಿರು ವಲಯಕ್ಕೆ ಸೇರ್ಪಡೆ ಮಾಡಲಾಗಿದೆ.
ರೆಡ್ ಝೋನ್ನಲ್ಲಿ ಬೆಂ.ಗ್ರಾ. ಬೇಡ
ಬೆಂಗಳೂರು: ಕೇಂದ್ರದ ಮಾರ್ಗಸೂಚಿ ಪ್ರಕಾರ ಕೆಂಪು ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕಿತರು ಇಲ್ಲದ ಕಾರಣ, ಆ ವಲಯದಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪುವಲಯದಲ್ಲಿ ಸೇರಿಸಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಆಶ್ಚರ್ಯ ಉಂಟಾಗಿದೆ. ಹೆಚ್ಚಿನ ಕೈಗಾರಿಕೆಗಳು ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿಯೇ ಬರುತ್ತವೆ. ಅಲ್ಲಿ ಕೈಗಾರಿಕೆಗಳು ಆರಂಭವಾಗಬೇಕಾಗಿದೆ. ಆದ್ದರಿಂದ ಕೆಂಪುವಲಯದಿಂದ ಹೊರ ಗಿಡುವಂತೆ ಮನವಿ ಮಾಡ ಲಾಗುವುದು ಎಂದು ಹೇಳಿದರು.
ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಶೇ. 33 ಕಾರ್ವಿುಕರೊಂದಿಗೆ ಕಾರ್ಯ ನಿರ್ವಹಣೆಗೆ ಷರತ್ತು ವಿಧಿಸಲಾಗುವುದು ಎಂದರು.
ಲಾಕ್ಡೌನ್ 3.0 ಏನು ಲಭ್ಯ?
ಕೆಲ ಸರ್ಕಾರಿ ಕಚೇರಿಗಳು, ಔಷಧ, ದಿನಸಿ,ಆಹಾರ ಡೆಲಿವರಿ, ತರಕಾರಿ, ಹಣ್ಣು ಮಾರಾಟ, ಆಸ್ಪತ್ರೆಗಳು, ಹಾಲು, ಪತ್ರಿಕೆ ವಿತರಣೆ, ಅಗತ್ಯ ಸೇವೆಗಳ ವಾಹನ ಸಂಚಾರ, ಅಗತ್ಯ ವಸ್ತುಗಳ ಕೈಗಾರಿಕೆ, ಬ್ಯಾಂಕ್, ಕೆಲವು ಎಲೆಕ್ಟ್ರಿಕಲ್ ರಿಪೇರಿ ಅಂಗಡಿ ಸೇವೆ ಲಭ್ಯವಿರುತ್ತದೆ. ಹಸಿರು ವಲಯದಲ್ಲಿ ಮಾತ್ರ ಮದ್ಯದಂಗಡಿ ಇರುತ್ತದೆ.
ಏನೇನು ಲಭ್ಯವಿಲ್ಲ?
ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ಸಾರಿಗೆ, ಕ್ಷೌರದಂಗಡಿ, ಶಾಲೆ- ಕಾಲೇಜು ಸೇವೆ ಇರುವುದಿಲ್ಲ.
ನಾಳೆಯಿಂದ ಸಿಮೆಂಟ್ ಮಾರಾಟ
ಸೀಲ್ಡೌನ್ ಹೊರತುಪಡಿಸಿದ ಪ್ರದೇಶಗಳಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಪ್ಲಂಬಿಂಗ್ ಮಳಿಗೆಗಳನ್ನು ಮೇ 4 ರಿಂದ ಆರಂಭಿಸಬಹುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆದೇಶಿಸಿದ್ದಾರೆ.
ಜಂಟಿ ಆಯುಕ್ತರಿಗೆ ವಿಶೇಷಾಧಿಕಾರ
ಬೆಂಗಳೂರು: ನಗರದಲ್ಲಿ ಲಾಕ್ಡೌನ್ ಮೂರನೇ ಭಾಗದ ಕೊಂಚ ಸಡಿಲಿಕೆ ನಂತರವೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ವಲಯಗಳ ಜಂಟಿ ಆಯುಕ್ತರು ಸೇರಿ 9 ಅಧಿಕಾರಿಗಳನ್ನು ತಾತ್ಕಾಲಿಕವಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.
ಲಾಕ್ಡೌನ್ ಅವಧಿ ಮುಕ್ತಾಯಗೊಳ್ಳು ವವರೆಗೂ ಕರೊನಾ ಸೋಂಕಿತ ಪ್ರದೇಶಗಳು ಸೇರಿ ಎಲ್ಲೆಡೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತೆಯಿಂದ ವಿಶೇಷಾಧಿಕಾರ ನೀಡಲಾಗಿದೆ. 8 ವಲಯಗಳ ಜಂಟಿ ಆಯುಕ್ತರ ಜತೆಗೆ ಆರ್.ಆರ್. ನಗರ ಕ್ಷೇತ್ರ ವ್ಯಾಪ್ತಿಯ ಯಶವಂತ ಪುರ ವಾರ್ಡ್ಗೆ, ಕೆಐಎಡಿಬಿ ಭೂಸ್ವಾಧೀನ ವಿಶೇಷಾಧಿಕಾರಿ ಎ.ಬಿ. ವಿಜಯಕುಮಾರ್ ಅವರನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಯಾಗಿ ನೇಮಿಸಲಾಗಿದೆ.