ದಿವ್ಯನೇತ್ರದಿಂದಲೇ ಗೋಚರಿಸಬಲ್ಲ ದೇವದೇವನ ಯೋಗೈಶ್ವರ್ಯ

untitled-design-684328edc4128
Published on
ಕಾಲು ಸರಿಯಿಲ್ಲದೆ ನಡೆಯಲು ಪಾಡುಪಡುವವನನ್ನು ಕುಂಟ ಎನ್ನುತ್ತೇವೆ. ಕೈಸರಿಯಿಲ್ಲದವ ಕುಣಿ. ಕಣ್ಣು-ಕಿವಿಗಳು ಸರಿಯಿಲ್ಲ ದವರು ಕುರುಡ-ಕಿವುಡರು. ಹೀಗೆ ಯಾವೊಂದು ಅಂಗದಲ್ಲಿ ಊನತೆಯಿದ್ದರೂ ಅಂತಹ ವಿಕಲಾಂಗರು ಶೋಚನೀಯರೇ. ಆದರೆ ಇವರಲ್ಲೆಲ್ಲಾ ಅತ್ಯಂತ ಶೋಚ್ಯರೆಂದರೆ ಕುರುಡರೇ. ಏಕೆ? ಅವರೇ ಅತ್ಯಂತ ಪರಾಧೀನರಾಗತಕ್ಕವರು.

ಕಣ್ಣಿನ ಪ್ರಾಧಾನ್ಯವನ್ನು ಹೇಳುವ ನುಡಿಗಟ್ಟುಗಳೂ ಪ್ರಚುರವೇ: ಹೆಣ್ಣು ಕುಟುಂಬದ ಕಣ್ಣು; ರಾಜ್ಯಕ್ಕೆ ರಾಜನೇ ಕಣ್ಣು ಮಹಾಭಾರತದ ಧೃತರಾಷ್ಟ್ರನು ಹುಟ್ಟುಕುರುಡ. ಅದನ್ನು ಸಾಂಕೇತಿಕವಾಗಿಯೂ ನೋಡುವುದುಂಟಷ್ಟೆ. ವಿವೇಕವೇ ಒಂದು ಕಣ್ಣು ಎಂದರಿವಾದಾಗ, ಅದನ್ನು ಕಳೆದುಕೊಂಡವನನ್ನು ಕಾಮಾಂಧನೆಂದೋ ಕ್ರೋಧಾಂಧನೆಂದೋ ಮದಾಂಧನೆಂದೋ ಚಿತ್ರಿಸುವುದುಂಟಲ್ಲವೇ?

ವಾಸ್ತವವಾಗಿ ಕಣ್ಣು ಗ್ರಹಿಸುವುದೇನನ್ನು? ಕೇವಲ ಬೆಳಕಿನ ಹೆಚ್ಚು-ಕಡಿಮೆಗಳನ್ನು. ಅದರ ವ್ಯಾಪ್ತಿಯೇನು? ಎರಡು ಕಣ್ಣುಗಳಿರುವುದರಿಂದ, ಅಡ್ಡಡ್ಡಲಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸ್ವಲ್ಪ ಜಾಸ್ತಿ; ಉದ್ದುದ್ದವಾಗಿ ನೂರೆಂಭತ್ತು ಡಿಗ್ರಿಗಳಿಗಿಂತ ಸಾಕಷ್ಟು ಕಮ್ಮಿ. ಅದು ಪಡೆಯುವುದೇನನ್ನು? ಒಂದು ವಸ್ತುವಿನ ತಲೆಕೆಳಕಾದ ಚಿತ್ರವನ್ನು! ಅದೂ ಆಯಾಮ ದ್ವಯದ ಪಟದ ಮೇಲೆ (two-dimensional screen) ! ಇದಿಷ್ಟೂ ಭೌತಿಕವಾದ ಕೆಲಸ. ಆಮೇಲೆ ಇದೆಲ್ಲವೂ ವೈದ್ಯುತ ಹಾಗೂ ರಾಸಾಯನಿಕ (electro-chemical) ಕ್ರಿಯೆಗಳಾಗಿ ಶಿರಸ್ಸಿಗೆ ತಲುಪುತ್ತವೆ. ಅಲ್ಲಿ ಅವನ್ನು ಅರ್ಥೈಸುವ ಕೆಲಸವು ನಡೆಯುತ್ತದೆ.

ಮತ್ತಾವುದೇ ಇಂದ್ರಿಯಕ್ಕಿಂತಲೂ ಹೆಚ್ಚಾಗಿ ಕಣ್ಣಿಗೆ ಸಂಬಂಧಿ ಸಿದ ನರಗಳೇ ಅತಿಹೆಚ್ಚಿನ ಸಂಖ್ಯೆಯಲ್ಲಿರುವುವೆಂಬುದೂ ಗಮ ನಾರ್ಹ, ಹಲವು ಲಕ್ಷ. (ಕಿವಿಗೆ ಸಂಬಂಧಿಸಿದವು ಕೆಲವು ಸಹಸ್ರ ಮಾತ್ರ). ಒಟ್ಟಿನಲ್ಲಿ ಜಗತ್ತನ್ನು ನಾವು ಅರಿತುಕೊಳ್ಳುವಲ್ಲಿ ಕಣ್ಣಿನಷ್ಟು ಮೌಲಿಕವಾಗಿ ಕೆಲಸಮಾಡುವ ಇಂದ್ರಿಯವು ಮತ್ತೊಂದಿಲ್ಲ.

ಇಷ್ಟಾಗಿಯೂ ಕಣ್ಣು ಗುರುತಿಸುವುದು ಹೊರಮೈಯ್ಯನ್ನಷ್ಟೆ. ಶ್ರೀರಂಗಮಹಾಗುರುಗಳು ಕೊಡುವ ನಿದರ್ಶನವು ಕಣ್ಣುತೆರೆಸು ವಂತಹುದು: ಬರೀ ಮೇಲ್ನೋಟದಿಂದೆ ಮೈಯಲ್ಲಿ ಮೂಳೆ ಯಿಲ್ಲವೆಂದು ಹೇಳಬಹುದು. ಆದರೆ ಎಕ್ಸ್ -ರೇ ಮೂಲಕ ನೋಡಿದಾಗಿ ಮೈಯ ಒಳಪದರಗಳನ್ನು ನೋಡಬಹುದು.

ಹಾಗೆ ನೋಡಿದರೆ ಮೂಳೆಯೆಂಬುದು ಗಟ್ಟಿಯಾದ ವಸ್ತು, ಬೆಳ್ಳಗಿರುವಂತಹುದು. ಹೀಗಾಗಿ ಇದೊಂದು ಸ್ಥೂಲ ಪದಾರ್ಥವೇ. ಆದರೆ ಈ ಶರೀರಾಂತರ್ಗತನಾದ ಜೀವನು ಸೂಕ್ಷ್ಮಪದಾರ್ಥ. ಈ ಕಣ್ಣು ಅದನ್ನೆಂತು ಕಾಣುವುದು? ಹೀಗಿರಲು, ಜೀವಾತ್ಮನಿಗೂ ಅಂತರ್ಯಾಮಿಯಾಗಿರುವ ಪರಮಾತ್ಮನನ್ನು ಕಾಣುವುದೆಂತು? ಪರಮಾತ್ಮನು ಸೂಕ್ಷ್ಮತಮ-ಪದಾರ್ಥ, ಪರವಸ್ತು. ಹೀಗಾಗಿ ಕಣ್ಣು ಕಾಣುವುದು ಸ್ಥೂಲವನ್ನು; ಸೂಕ್ಷ್ಮವನ್ನಲ್ಲ; ಪರವನ್ನಂತೂ ಅಲ್ಲವೇ ಅಲ್ಲ. ಪರಮಾತ್ಮನನ್ನು ಕಾಣಲು ಜ್ಞಾನ-ಚಕ್ಷುಸ್, ತಪಶ್ಚಕ್ಷುಸ್ಸುಗಳು ಬೇಕೆಂದು ಆಯುರ್ವೆದ ಗ್ರಂಥಗಳು ಸಹ ಹೇಳುವುವು ಎಂಬುದನ್ನು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು.

ಚಕ್ಷುಸ್ ಎಂದರೆ ಕಣ್ಣು. ಭಗವದ್ಗೀತೆಯ ಸನ್ನಿವೇಶವನ್ನು ನೋಡೋಣ. ಕೃಷ್ಣನ ಮಾತುಗಳಿಂದಾಗಿ ತನ್ನ ಮೋಹವು ಕಳೆಯಿತೆಂದು ಅರ್ಜುನ ನೇನೋ ಹೇಳುತ್ತಾನೆ. ಕೃಷ್ಣನನ್ನು ಪರಮೇಶ್ವರನೆಂದು ಸಂಬೋಧಿ ಸಿದ ಅರ್ಜುನನು, ಆತನ ಐಶ್ವರ ರೂಪವನ್ನು ಕಾಣಬಯಸುತ್ತಾನೆ. (ಐಶ್ವರ್ಯವೆಂಬುದು ಬೇರೆ: ಒಡೆತನ, ಸಿರಿ). ‘ಅದನ್ನು ಕಾಣುವುದು ನನಗೆ ಶಕ್ಯವೆಂದು ನೀ ಭಾವಿಸುವೆಯಾದರೆ, ಓ ಯೋಗೇಶ್ವರಾ, ಅದನ್ನು ತೋರಿಸು’ ಎನ್ನುತ್ತಾನೆ. ಅದಕ್ಕೆ ಆ ಮಹಾಯೋಗೇಶ್ವರನು, ‘ಯಾರೂ ಕಾಣದ ಆಶ್ಚರ್ಯಮಯವಾದ ರೂಪವನ್ನು ನನ್ನೀ ದೇಹದಲ್ಲಿಲ್ಲಿಯೇ ನೋಡು. ನಿನ್ನ ಸ್ವ-ಚಕ್ಷುವಿನಿಂದ ಇದನ್ನು ನೀ ನೋಡಲಾರೆಯಾಗಿ, ದಿವ್ಯಚಕ್ಷುಸ್ಸನ್ನಿದೋ ನಿನಗೆ ಕೊಡುತ್ತೇನೆ’ (ದಿವ್ಯಂ ದದಾಮಿ ತೇ ಚಕ್ಷುಃ) - ಎನ್ನುತ್ತಾನೆ.

ದುರ್ಯೋಧನನ ಸಭೆಯಲ್ಲಿಯೂ ತನ್ನ ದಿವ್ಯರೂಪವನ್ನು ತೋರಿಸಿದಾಗ ದಿವ್ಯದೃಷ್ಟಿ ಇರದವರಾರೂ ಅದನ್ನು ನೋಡಲಾಗದೆ ಕಣ್ಮುಚ್ಚಿಕೊಂಡರು; ಭೀಷ್ಮ-ದ್ರೋಣ-ವಿದುರರು ಹಾಗೂ ಧೃತರಾಷ್ಟ್ರ - ಇವರಿಗೆ ಮಾತ್ರ ಕೃಷ್ಣದಯೆಯಿಂದ ನೋಡಲಾಯಿತು ಎಂಬುದು ಮಹಾಭಾರತದಲ್ಲಿ ನಿರೂಪಿತವಾಗಿದೆ. ಇಲ್ಲಿ ದಿವ್ಯಚಕ್ಷುಸ್ಸೆಂದರೆ ಅದೇನೋ ಒಂದು ಕನ್ನಡಕದಂತಿರುವ ಭೌತಿಕವಸ್ತುವೆಂದುಕೊಳ್ಳುವುದಲ್ಲ! ಅದು ಅ-ಪ್ರಾಕೃತವಾದದ್ದು.

ಗೀತೆಯ ಈ ಅಧ್ಯಾಯದ ಹೆಸರೇ ವಿಶ್ವರೂಪದರ್ಶನ ಯೋಗ ಎಂಬುದಾಗಿ. ಕಣ್ಣು ತಾನಾಗಿ ನೋಡಬಲ್ಲ ವಸ್ತುಗಳು ಸ್ಥೂಲ, ಸೀಮಿತ. ಎಂದೇ ಈ ನೇತ್ರವನ್ನು ಕೇವಲ ಚರ್ಮಚಕ್ಷುಸ್, ಮಾಂಸಚಕ್ಷುಸ್ ಎನ್ನುತ್ತಾರೆ. ಭಗವಂತನ ವಿಶ್ವರೂಪ-ಯೋಗೈಶ್ವರ್ಯವನ್ನು ಕಾಣಲು ಬೇಕಾದುದು ದಿವ್ಯ-ಚಕ್ಷುಸ್, ಅರ್ಥಾತ್ ಜ್ಞಾನ-ನೇತ್ರ.

ಭಗವಂತನ ರೂಪ-ಸ್ವರೂಪಗಳನ್ನು ಊಹಿಸಲೂ ನಮಗಾಗದು. ದೇವತೆಗಳಿಗೂ ಎಟುಕಿಸಿಕೊಳ್ಳಲಾಗದದು! ಶ್ರೀರಂಗಸದ್ಗುರುಗಳು ಹೇಳುವಂತೆ, ‘ನರರಥದಲ್ಲೇ ಕುಳಿತಿರುವ ನಾರಾಯಣನು ಆ ಮತ್ತೊಂದು ದೃಷ್ಟಿಯನ್ನು ಕರುಣಿಸಬೇಕು’. ಅರ್ಥಾತ್, ಆತನೆಲ್ಲೋ ದೂರದಲ್ಲಿರುವವನೆಂದೇನಲ್ಲ. ನಮ್ಮಲ್ಲೇ ಇರುವ ಆತನಲ್ಲಿಯ ಅನನ್ಯ-ಭಕ್ತಿಯಿಂದಲೇ ಶಕ್ಯವದು.

ದೇವದೇವನೂ ಯೋಗೇಶ್ವರನೂ ಆದ ಹೃದಿಸ್ಥನ ಯೋಗೈಶ್ವರ್ಯವನ್ನು ಕಂಡು ಆನಂದಿಸಲು ದಿವ್ಯಚಕ್ಷುಸ್ಸಿನ ಯೋಗಕ್ಕಾಗಿ ನಾವು ಹಂಬಲಿಸಬೇಕಲ್ಲವೇ? (ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net