ಅಪಾಯಕ್ಕೆ ಆಹ್ವಾನಿಸುತ್ತಿರುವ ಹಳ್ಳಗಳು

kere mannu
ಕೋಲಾರ ತಾಲೂಕಿನ ವಡಗೂರು ಕೆರೆಯಲ್ಲಿ ಹಳಾವಾಗಿ ಮಣ್ಣು ತೆಗೆದಿರುವುದು.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ರಾಷ್ಟ್ರೀಯ, ರಾಜ್ಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿಗೆ ಕೆರೆಗಳಲ್ಲಿ ಮಣ್ಣನ್ನು ಅವ್ಯಾಹತವಾಗಿ ಬಳಕೆ ಮಾಡಿಕೊಂಡಿದ್ದು, ನಿರ್ಮಾಣ ಮಾಡಲಾಗಿರುವ ದೊಡ್ಡ ದೊಡ್ಡ ಗುಂಡಿಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ.

ಬೆಂಗಳೂರು& ಚೆನ್ನೆ$ ಕಾರಿಡಾರ್​, ಬೆಂಗಳೂರು&ಚೆನ್ನೆ$ ರಾಷ್ಟ್ರೀಯ ಹೆದ್ದಾರಿ-75 ನಿರ್ಮಾಣವಾಗಿವೆ. ಬೆಂಗಳೂರು, ಮದನಪಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಗತಿಯಲ್ಲಿವೆ. ಕೆರೆಗಳಲ್ಲಿನ ಮಣ್ಣನ್ನು ಅವೈಜ್ಞಾನಿಕವಾಗಿ ಗುತ್ತಿಗೆದಾರರು ತೆಗೆಯುತ್ತಿದ್ದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮೌನಕ್ಕೆ ಒಳಗಾಗಿದ್ದಾರೆ.

ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಕೆಜಿಎ್​ ಹಾಗೂ ಮಾಲೂರು ತಾಲೂಕುಗಳಲ್ಲಿ ದಿಲೀಪ್​ ಬಿಲ್ಡ್​ಕಾನ್​ ಲಿಮಿಟೆಡ್​ ಹಾಗೂ ಕೆಸಿಸಿ ಬಿಲ್ಡ್​ಕಾನ್​ ಪೆವೇಟ್​ ಲಿಮಿಟೆಡ್​ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮಣ್ಣು ತೆಗೆದು ಜೀವಹಾನಿಗೆ ಕಾರಣವಾಗಿರುವ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೆದ್ದಾರಿಗಳ ರಸ್ತೆ ನಿರ್ಮಾಣಕ್ಕೆ ಕೋಲಾರ, ಮಾಲೂರು, ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಮಣ್ಣನ್ನು ತೆಗೆದುಕೊಳ್ಳಲಾಗಿದೆ. ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಆಳವಾದ ಗುಂಡಿಗಳನ್ನು ಜೆಸಿಬಿ, ಇಟಾಚಿ ಯಂತ್ರಗಳ ಮೂಲಕ ತೆಗೆಯಲಾಗಿದೆ. ತೆಗೆದುಕೊಂಡಿರುವ ಲೋಡ್​ಗಟ್ಟಲೇ ಮಣ್ಣಿಗೆ ಸರ್ಕಾರಕ್ಕೆ ಶುಲ್ಕ ಪಾವತಿಸದೆ ಗುತ್ತಿಗೆದಾರರು ವಂಚಿಸಿದ್ದಾರೆ. ನೀರು ಇಲ್ಲದ ಸಮಯದಲ್ಲಿ ಅನೇಕ ಕೆರೆಗಳಲ್ಲಿ ಗುತ್ತಿಗೆದಾರರು ಮಣ್ಣನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ, ಸರ್ಕಾರಕ್ಕೆ ಶುಲ್ಕವನ್ನು ಪಾವತಿಸದೇ, ಪ್ರಭಾವಿಗಳ ಜೇಬಿಗೆ ಹಾಕುತ್ತಿರುವುದು ಕಂಡುಬಂದಿದೆ.

ಹೆದ್ದಾರಿ ನಿರ್ಮಾಣದ ಗುತ್ತಿಗೆಯನ್ನು ಹೊರ ರಾಜ್ಯಗಳ ಗುತ್ತಿಗೆದಾರರು ಪಡೆದುಕೊಂಡಿದ್ದು, ರಸ್ತೆಗೆ ಮಣ್ಣು ಸಾಗಿಸಲು ಸ್ಥಳಿಯರಿಗೆ ಉಪ ಗುತ್ತಿಗೆ ನೀಡಿದ್ದರೂ, ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಸ್ವರೂಪವನ್ನು ಹಾಳುಮಾಡಿದ್ದಾರೆ.

ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಮೊದಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು, ನಂತರ ಅವರು ಸೂಚಿಸಿದ ಜಾಗದಲ್ಲಿ ಮಾತ್ರ ಇಂತಿಷ್ಟು ಅಗಲ, ಉದ್ದ ಹಾಗೂ ಆಳದಲ್ಲಿ ವೈಜ್ಞಾನಿಕವಾಗಿ ಮಣ್ಣು ತೆಗೆಯಬೇಕು. ಮಣ್ಣಿನ ಪ್ರಮಾಣಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಶುಲ್ಕಪಾವತಿಸಬೇಕು. ಇದ್ಯಾವ ನಿಯಮವೂ ಇಲ್ಲಿ ಪಾಲನೆಯಾಗಿಲ್ಲ. ಅವೈಜ್ಞಾನಿಕವಾಗಿ ಮಣ್ಣು ತೆಗೆದು ಅತಿಯಾದ ಅಳಕ್ಕೆ ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ಕೆರೆಗಳಿಗೆ ನೀರು ಹರಿದರೆ ಹಳ್ಳ ಯಾವುದು ಎಂಬುದು ಗೋಚರಿಸುವುದಿಲ್ಲ. ಕೆರೆಗಳಲ್ಲಿ ಜಾನುವಾರುಗಳು ನೀರು ಕುಡಿಯಲು ಹೋದಾಗ, ಮಕ್ಕಳು, ಯುವಕರು ಈಜಲು ಹೋದಾಗ ಅಪಾಯ ಸಂಭವಿಸುವ ಸಾಧ್ಯತೆ ಜಾಸ್ತಿಯಾಗಿದೆ.

* ಈಜಲು ಹೋದವರು ನೀರು ಪಾಲು

ಎಕ್ಸ್​ಪ್ರೆಸ್​ ಕಾರಿಡಾರ್​ ನಿರ್ಮಾಣಕ್ಕಾಗಿ ಕೆಲವೆಡೆ ಅನುಮತಿ ಪಡೆದು ಹಾಗೂ ಹೆಚ್ಚಿನ ಕೆರೆಗಳಲ್ಲಿ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸಿ ಮಣ್ಣು ತೆಗೆದಿದ್ದಾರೆ. ಇದರಿಂದಾಗಿ ಅಪಾಯಕಾರಿ ಹಳ್ಳಗಳು ನಿರ್ಮಾಣವಾಗಿದ್ದು, ಈಜಲು ಹೋದ ಮೂವರು ಮೃತಪಟ್ಟ ಟನೆ ಕೆಲ ತಿಂಗಳ ಹಿಂದೆ ಬೇತಮಂಗಲದಲ್ಲಿ ನಡೆದಿದೆ. ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೆರೆಗಳ ಪುನಶ್ಚೇತನಗೊಳಿಸಲು ಇಲಾಖಾಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

* ಇಟ್ಟಿಗೆಫ್ಯಾಕ್ಟಾರಿ ಮಾಲೀಕರಿಂದ ಕೆರೆ ಮೇಲೆ ಕಣ್ಣು

ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಇಟ್ಟಿಗೆ ಕಾರ್ಖಾನೆಗಳ ಮಾಲೀಕರು ಕೆರೆಗಳ ಮೇಲೆ ಕಣ್ಣಿಟ್ಟಿದ್ದಾರೆ. ರಾತ್ರಿ ಹಗಲು ಎನ್ನದೆ ಜೆಸಿಬಿ, ಟ್ರಾ$್ಯಕ್ಟರ್​ಗಳ ಮೂಲಕ ಮಣ್ಣನ್ನು ಲೋಡ್​ಗಟ್ಟಲೇ ಸಾಗಿಸಿಕೊಳ್ಳುತ್ತಿದ್ದಾರೆ. ಈ ವಿಚಾರವು ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ಇದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.

ಕೋಟ್​...

ಕೆರೆಗಳಲ್ಲಿ ಮಣ್ಣು ತೆಗೆಯುವ ಮುಂಚೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ರಾಯಧನ ಕಟ್ಟಬೇಕು. ಅತಿಯಾದ ಆಳ ತೆಗೆಯದಿರಲು ಸೂಚಿಸಲಾಗಿದ್ದು, ಗಮನಕ್ಕೆ ಬಂದರೆ ಪರಿಶೀಲಿಸಿ ಕ್ರಮವಹಿಸಲಾಗುವುದು.

- ಡಾ.ಎಂ.ಆರ್​.ರವಿ, ಜಿಲ್ಲಾಧಿಕಾರಿ, ಕೋಲಾರ.

ಕೋಟ್​...

ಹೆದ್ದಾರಿ ಪ್ರಾಧಿಕಾರದವರು ಕೆರೆಗಳಲ್ಲಿ ಮಣ್ಣನ್ನು ಎಗ್ಗಿಲ್ಲದೆ ತೆಗೆದಿದ್ದು, ಕೆರೆಯ ಸ್ವರೂಪವನ್ನೇ ಹಾನಿಪಡಿಸಿದ್ದಾರೆ. ಹಳ್ಳಗಳು ಇದ್ದ ಕೆರೆಗಳಲ್ಲಿ ಈಜಲು ಹೋದ ಕೆಲವರು ಪ್ರಾಣಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರೇ ಕಾರಣ. ಆದಷ್ಟು ಬೇಗ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡಬೇಕು.

- ರಾಜೇಶ್​ ಸಿಂಗ್​, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net