ಜಿಲ್ಲಾಸ್ಪತ್ರೆಯಲ್ಲಿಲ್ಲ ಆಡಳಿತದ ಹಿಡಿತ!

16-klr-50 SNR
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ನಗರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಯಲ್ಲಿ ಆಡಳಿತ ಹಿಡಿತ ತಪ್ಪಿದ್ದು, ಈ ಪರಿಣಾಮ ಆಸ್ಪತ್ರೆ ಒಂದಲ್ಲ ಒಂದು ರೀತಿಯ ಅನಾಹುತಗಳಿಗೆ ಕೇಂದ್ರ ಬಿಂದುವಾಗಿದೆ.

ಜಿಲ್ಲಾ ಶಸ್ತ್ರ್ರ ಚಿಕಿತ್ಸಕರಾಗಿ ಕಾರ್ಯನಿರ್ವಹಿಸಿದವರ ಪೈಕಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಶ್ರಮಿಸಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಬಹುತೇಕ ಮಂದಿ ಜವಾಬ್ದಾರಿ ಮರೆತು ಸ್ವಂತ ಸ್ಥಳದಲ್ಲಿಯೇ ಠಿಕಾಣಿ ಹೂಡಿ ರಾಜಕೀಯ, ಜಾತಿ ಬಲ ಪ್ರಯೋಗ ಮಾಡಿಕೊಂಡು ದರ್ಪ ತೋರುತ್ತಿದ್ದಾರೆ ಎಂಬುದಕ್ಕೆ ಆಸ್ಪತ್ರೆಯ ಅವ್ಯವಸ್ಥೆಯೇ ನಿದರ್ಶನ.

ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸೀಸ್​, ಎಂಆರ್​ಐ&ಸಿಟಿ ಸ್ಕಾ$ನ್​, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಇಎನ್​ಟಿ, ಯೂರಾಲಜಿ, ಕೀಲು ಮತ್ತು ಮೂಳೆ, ಕಣ್ಣು, ಮಿದುಳು ತಪಾಸಣೆ ವಿಭಾಗ ಹೀಗೆ ಹಲವು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಗೆ ಜಿಲ್ಲೆ ಸೇರಿ ಹೊರ ಜಿಲ್ಲೆ, ರಾಜ್ಯಗಳ ಬಡವರು ಚಿಕಿತ್ಸೆಗಾಗಿ ಆಗಮಿಸುತ್ತಾರೆ.

ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿದ್ದರೂ ವಿಭಾಗಕ್ಕೆ ಸಂಬಂಧಪಟ್ಟ ಸಲಕರಣೆಗಳನ್ನು ಕಲ್ಪಿಸುವಲ್ಲಿ ಆಸ್ಪತ್ರೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು, ವೈದ್ಯಾಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಸಲಕರಣೆಗಳ ಕೊರತೆಯಿಂದ ಶಸ್ತ್ರ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವುದು ವಿಳಂಬವಾಗುತ್ತಿದ್ದು, ಜಿಲ್ಲಾ ಸರ್ಜನ್​ ಆಗಲಿ, ಇಲಾಖೆಯ ಅಧಿಕಾರಿಗಳಾಗಲಿ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಕಾರಣದಿಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.

* ತಾರತಮ್ಯದ ಆರೋಪ

ಶುಶ್ರೂಷಾಧಿಕಾರಿಗಳು ಕೆಲಸ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಗಂಭೀರವಾಗಿದೆ. ಐಸಿಯು, ಒಟಿ, ವಾರ್ಡ್​, ಡಿ ಗ್ರೂಪ್​, ತುರ್ತು ವಿಭಾಗ ಹೀಗೆ ಹಲವು ಕಡೆ ಕೆಲಸ ಮಾಡುವ ನರ್ಸ್​ಗಳ ನಿಯೋಜನೆ ವಿಚಾರದಲ್ಲೂ ಶುಶ್ರೂಷಾಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ರಾಜಕೀಯ ಒತ್ತಡ ತಂದವರಿಗೆ ಇಷ್ಟ ಬಂದ ಕಡೆ ಕೆಲಸಕ್ಕೆ ನಿಯೋಜನೆ ಮಾಡುತ್ತಾರೆ. ಯಾವುದೇ ಪ್ರಾಬಲ್ಯ ಇಲ್ಲದ ಅರ್ಹರಿಗೆ ಕೆಲಸ ನೀಡದೆ ವಂಚಿಸಲಾಗುತ್ತಿದೆ. ಇದು ಸಿಬ್ಬಂದಿಯ ಅಸಮಾಧಾನಕ್ಕೂ ಕಾರಣವಾಗಿದ್ದು, ಅಧಿಕಾರಿಗಳಲ್ಲಿನ ಸಮನ್ವಯದ ಕೊರತೆಯೇ ಕಾರಣ ಎಂಬುದು ಸಿಬ್ಬಂದಿ ಆರೋಪವಾಗಿದೆ.

* ಭದ್ರತಾ ರ್ನಿಲಕ್ಷ$್ಯ

ಏನಾದರೂ ಅನಾಹುತಗಳಾದಾಗ ಸಿಸಿ ಕ್ಯಾಮರಾಗಳನ್ನೇ ಪರಿಶೀಲನೆ ಮಾಡುವುದು ಅಧಿಕಾರಿಗಳ ವಾಡಿಕೆಯಾಗಿದೆ. ಇಲ್ಲಿನ ಅವ್ಯವಸ್ಥೆಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಇಲಾಖೆ ಹೊರಠಾಣೆ ತೆರೆದು ಕಾನ್​ಸ್ಟೇಬಲ್​, ಹೋಂ ಗಾರ್ಡ್​ಗಳನ್ನು ನಿಯೋಜಿಸಿದೆಯಾದರೂ ಈಗಲೂ ರಾತ್ರಿ ಪಾಳಿ ಭದ್ರತಾ ಸಿಬ್ಬಂದಿ ಯಾರೂ ಇರುವುದಿಲ್ಲ.

* ಕಾಯಂ ಡಿಎಸ್​ ನೇಮಕ ನನೆಗುದಿಗೆ

ಜಿಲ್ಲಾ ಸರ್ಜನ್​ ಡಾ.ವಿಜಯ್​ ಕುಮಾರ್​ ನಿವೃತ್ತಿಯ ನಂತರ ಸರ್ಕಾರ ಕಾಯಂ ಜಿಲ್ಲಾ ಸರ್ಜನ್​ ರನ್ನು ಇದುವರೆಗೂ ನೇಮಕ ಮಾಡಿಲ್ಲ. ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ಕಾಯಂ ಸರ್ಜನ್​ ನೇಮಕ ಆಗಬಹುದು ಎಂಬ ನಿರೀೆಯಿತ್ತು. ಡಾ.ಮಮತಾ ಅವರು ಪ್ರಭಾರ ವಹಿಸಿಕೊಂಡರಾದರೂ ಸಮರ್ಪಕವಾಗಿ ಹುದ್ದೆ ನಿರ್ವಹಣೆ ಮಾಡಲಾಗದ ಕಾರಣ ವಿಜಿಲೆನ್ಸ್​ ಅಧಿಕಾರಿ ಡಾ.ಜಗದೀಶ್​ ಅವರಿಗೆ ಪ್ರಭಾರವಹಿಸಿ ನಿಯೋಜನೆ ಮಾಡಲಾಗಿದೆ. ಕಾಯಂ ಅಧಿಕಾರಿ ನೇಮಕ ಮಾಡಬೇಕು, ಸುಮಾರು ವರ್ಷಗಳಿಂದ ಠಿಕಾಣಿ ಹೂಡಿದ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

* ಲೋಪ ಸರಿಪಡಿಸಿಕೊಳ್ಳಲು ರ್ನಿಲಕ್ಷ$್ಯ

ಉಪ ಲೋಕಾಯುಕ್ತರು, ಮಾನವ ಹಕ್ಕುಗಳ ಆಯೋಗ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ತಂಡ, ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಆಸ್ಪತ್ರೆಗೆ ಭೇಟಿ ನೀಡಿದಾಗ ಅನೇಕ ಲೋಪಗಳು ಕಂಡು ಬಂದಿದ್ದು, ಸರಿಪಡಿಸಿಕೊಳ್ಳುವಂತೆ ಗಡುವು ನೀಡಿ, ಏನೆಲ್ಲ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದ್ದರೂ ಇಲ್ಲಿನ ಅಧಿಕಾರಿಗಳು ಯಾವುದೇ ರೀತಿ ಕ್ರಮಕೈಗೊಳ್ಳದೆ ರ್ನಿಲಕ್ಷ$್ಯ ತೋರಿದ್ದಾರೆ.

* ಸಂಭವಿಸಿರುವ ಅನಾಹುತಗಳು?

- ನವ ಜಾತ ಶಿಶು ಕಳವು

- ವಾರ್ಡ್​ಗಳಲ್ಲಿ ಅವಧಿ ಮೀರಿದ್ದ ಔಷಧ ಪತ್ತೆ.

- ಮಗುವನ್ನು ಚಿಕಿತ್ಸೆಗೆಂದು ತಂದು ಬಿಟ್ಟು ಹೋಗಿರುವುದು.

- ಚಿಕ್ಕಬಳ್ಳಾಪುರ ಜಿಲ್ಲೆಯ ಗರ್ಭಿಣಿಯೊಬ್ಬರು ಹೆರಿಗೆ ನಂತರ ಮಗು ಬಿಟ್ಟು ಹೋಗಿರುವುದು

ಕೋಟ್​...

ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ಸಮಸ್ಯೆಗಳು ಶಾಶ್ವತವಾಗಿ ಉಳಿದುಕೊಂಡಿವೆ. ತೆಗೆದುಕೊಳ್ಳುವ ಸಂಬಳಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಈಗಾಗಲೇ ಸಂಭವಿಸಿರುವ ಅನಾಹುತಗಳಿಗೆ ಅಧಿಕಾರಿಗಳಿಗೆ ನೇರ ಹೊಣೆ.

> ಮಂಜುನಾಥ್​, ರೈತ ಸಂದ ಜಿಲ್ಲಾಧ್ಯಕ್ಷ, ಕೋಲಾರ

ಕೋಟ್​...

ಭದ್ರತಾ ದೃಷ್ಟಿಯಿಂದ ಹೋಂ ಗಾರ್ಡ್​ಗಳನ್ನು ನಿಯೋಜಿಸಲಾಗಿದೆ. ಮಕ್ಕಳನ್ನು ಬಿಟ್ಟು ಹೋಗಿರುವ ಸಂಬಂಧ ತನಿಖಾ ತಂಡ ರಚನೆ ಮಾಡಲಾಗಿದೆ. ಅವಧಿ ಮೀರಿರುವ ಔಷಧ ಪತ್ತೆಯಾಗಿರುವ ಸಂಬಂಧ ವರದಿ ತಯಾರಿಸಲಾಗಿದೆ.

> ಡಾ.ಜಗದೀಶ್​, ಪ್ರಭಾರ ಡಿಎಸ್​, ಎಸ್​ಎನ್​ಆರ್​ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net