ಬೆಂಗಳೂರು
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್. ಕಾಂತರಾಜು ನೇತೃತ್ವದ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ದೇವಾಂಗ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂತರಾಜು ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ-ಅಂಶ ಸ್ಪಷ್ಟವಾಗಿ ತಿಳಿಯಲಿದೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ವರದಿ ಸಿದ್ಧವಾಗಿತ್ತು. ರಾಜಕೀಯ ಕಾರಣಗಳಿಗಾಗಿ ವರದಿ ಸ್ವೀಕಾರವಾಗಲಿಲ್ಲ. ಈ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಂತರಾಜು ವರದಿ ಸ್ವೀಕಾರ ಮಾಡಲಿಲ್ಲ. ವರದಿ ಅನುಷ್ಠಾನದಿಂದ ಜಾತಿಗಳ ಸ್ಥಿತಿಗತಿ ಆಧರಿಸಿ ಶಿಕ್ಷಣ, ಉದ್ಯೋಗ ಸೇರಿ ನಾನಾ ವಲಯಗಳಲ್ಲಿ ಅವಕಾಶ ಮತ್ತು ಸೌಲಭ್ಯ ಸಿಗಲಿದೆ ಎಂದರು.
ರಾಜಕೀಯ ಪ್ರಾತಿನಿಧ್ಯಕ್ಕೆ ಪ್ರಮಾಣಿಕ ಪ್ರಯತ್ನ:
ದೇವಾಂಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಮುಖ್ಯಮಂತ್ರಿಗಳು, ಉಮಾಶ್ರೀ ಅವರನ್ನು ಸಚಿವರನ್ನಾಗಿ ಮಾಡಿದ್ದರು. ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮುಖ್ಯಮಂತ್ರಿ ಯಾರದರೂ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಮುಂದೆಯೂ ಈ ಸಮಾಜಕ್ಕೆ ರಾಜಕೀಯ ಅವಕಾಶ ಕಲ್ಪಿಸಲಿದ್ದಾರೆ ಎಂದರು.
ಈ ಸಮುದಾಯದ ಮೂಲ ಕಸುಬು ನೇಕಾರಿಕೆ. ಚುನಾವಣಾ ಸಂದರ್ಭದಲ್ಲಿ ನೇಕಾರರಿಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತರುತ್ತದೆ. ಯಾವುದೇ ಸಮಾಜದ ಸಂಘಟನೆ ಜತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಮುಖ್ಯ. ಆ ನಿಟ್ಟಿನಲ್ಲಿ ದೇವಾಂಗ ಸಮಾಜ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮವಾಗಿದೆ. ಶಿಕ್ಷಣದಿಂದ ಸಮಾಜ ಪ್ರಬಲವಾಗುತ್ತದೆ. ನಮ್ಮ ಪಾಲಕರು ಅನಕ್ಷರಸ್ಥರಾಗಿದ್ದರು. ನಮಗೆ ವಿದ್ಯಾಭ್ಯಾಸ ನೀಡಿದ ಪರಿಣಾಮ ನಾನು ಇಂದು ಮಂತ್ರಿಯಾಗಿ ಇಲ್ಲಿ ನಿಲ್ಲಲ್ಲು ಸಾಧ್ಯವಾಗಿದೆ ಎಂದರು.
ಉಚಿತ ವಿದ್ಯುತ್ ನೀಡುವ ಆಲೋಚನೆ:
ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ನೇಕಾರರಿಗೆ ೨೦ ಎಚ್‌ಪಿವರೆಗೂ ಉಚಿತ ವಿದ್ಯುತ್ ನೀಡುವ ಆಲೋಚನೆ ಸರ್ಕಾರದ ಮುಂದಿದೆ. ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ವಿದ್ಯುತ್ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕೂಡ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲ್ಲಿದ್ದಾರೆ. ನೇಕಾರ ಅಭಿವೃದ್ಧಿ ನಿಗಮ ರಚನೆಯಾಗಿದೆ. ಆದರೆ ಅದಕ್ಕೆ ಆರ್ಥಿಕ ಶಕ್ತಿ ನೀಡುವ ಕೆಲಸ ಆಗಬೇಕಾಗಿದ್ದು, ಅದನ್ನು ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಪ್ರತಿಭೆಗಳ ಕೊರತೆಯಿದ್ದು, ಅದನ್ನು ಗುರುತಿಸುವ ಅದನ್ನು ನೀಗಿಸುವ ಕೆಲಸವನ್ನು ದೇವಾಂಗ ಸಂಘದವರು ಮಾಡಿದ್ದಾರೆ. ಈ ಸಮಾಜ ದೇವರದಾಸಿಮಯ್ಯ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಂಪಿ ಗಾಯತ್ರಿ ಪೀಠಾ ಮಹಾಸಂಸ್ಥಾನದ ಶ್ರೀದಯಾನಂದಪುರಿ ಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ನೃಪತುಂಗ ವಿಶ್ವವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಶ್ರೀನಿವಾಸ್ ಬಳ್ಳಿ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಭಾಸ್ಕರಯ್ಯ ಸೇರಿ ಮತ್ತಿತರರು ಉಪಸ್ಥಿತರಿದ್ದರು.