

ಭದ್ರಾವತಿ: ವೇದ, ಉಪನಿಷತ್ತುಗಳ ಕಾಲದಲ್ಲೂ ಸಂವಾದ, ಚರ್ಚೆಗಳು ನಡೆಯುತ್ತಿತ್ತು. ಜನರ ಅಹವಾಲುಗಳನ್ನು ಆಲಿಸಲಾಗುತ್ತಿತ್ತು. ಆದರೆ ಅನುಭವ ಮಂಟಪ ಎಂಬುದು ಇರಲೇ ಇಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಬೇಕು ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಎಚ್ಚರಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗದಿಂದ ಜನ್ನಾಪುರದ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಚನ ಮಂಟಪ, ಡಿ.ಪಿ.ಶಾಂತಾ, ಎಚ್.ಎಸ್.ಧರಣೇಶ್, ಸಾವಿತ್ರಮ್ಮ ಮತ್ತು ಎಚ್.ವಿ.ಶಿವರುದ್ರಪ್ಪ ದತ್ತಿ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಅನುಭವ ಮಂಟಪ ಇತ್ತು ಎಂಬುದನ್ನು ಇಂದಿನ ವಿದ್ವಾಂಸರು, ಖ್ಯಾತ ಸಾಹಿತಿಗಳು, ಇತಿಹಾಸಕಾರರು ಸೂಕ್ತ ಸಾಕ್ಷಾೃಧಾರ ಹಾಗೂ ಐತಿಹಾಸಿಕ ದಾಖಲೆಗಳೊಂದಿಗೆ ತಿಳಿಸಿದ್ದಾರೆ. ಅದು ಏನು ಮಾಡಿತು ಎಂಬುದನ್ನು ಸಹ ತಿಳಿಸಿದ್ದಾರೆ. ಆದರೆ ಕೆಲವರು ವ್ಯವಸ್ಥಿತವಾಗಿ ಇದರ ಅಸ್ತಿತ್ವದ ಬಗ್ಗೆ ಮಾತನಾಡುತ್ತ ಅನುಭವ ಮಂಟಪವನ್ನು ಮರೆಮಾಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಾದಿ ಶಿವಶರಣರು ಪ್ರತಿಪಾದಿಸಿದ ವಚನ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಯುವಜನರಿಗೆ ತಿಳಿಸುವ ಕೆಲಸ ಆಗಬೇಕಿದೆ. ಆದರೆ ಇತ್ತೀಚೆಗೆ ಐಪಿಎಲ್ ಪಂದ್ಯಗಳ ಮೇಲೆ ಬೆಟಿಂಗ್ ಆಡಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ವ್ಯವಸ್ಥೆ ನಾಶವಾಗುತ್ತಿದೆ. ಶ್ರಮ ಸಂಸ್ಕೃತಿ ಇಲ್ಲದೆ ದಿಢೀರ್ ಶ್ರೀಮಂತರಾಗಬೇಕು ಎಂಬ ಭಾವನೆ ಸರಿಯಲ್ಲ ಎಂದರು.
ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ.ಧನಂಜಯ ಉಪನ್ಯಾಸ ನೀಡಿ, ಬಸವಣ್ಣ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. ಅದನ್ನು ಎಲ್ಲರಲ್ಲೂ, ಎಲ್ಲದರಲ್ಲೂ ಅಳವಡಿಸಿ ನೀಡಿದ ಚಿಂತನೆಗಳು ವಿಶ್ವವ್ಯಾಪಿಯಾದವು. ಅವರು ಕಂಡ ಕನಸನ್ನು ನನಸು ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿಯಾದರು. ಶರಣಾಗತಿಯ ಬದಲಾಗಿ ಸ್ವಾಭಿಮಾನದ ಕಿಚ್ಚನ್ನು ಸಮಾಜಕ್ಕೆ ತಿಳಿಸಿದರು. ದಾನದ ಸಂಸ್ಕೃತಿ ಬದಲಿಗೆ ದಾಸೋಹ, ದೇವಾಲಯ ಸಂಸ್ಕೃತಿಗೆ ಬದಲಾಗಿ ದೇಹವೇ ದೇವಾಲಯ, ಯಜಮಾನ ಸಂಸ್ಕೃತಿ ವಿರುದ್ಧ ಸಮಾನತೆ ಪ್ರತಿಪಾದಿಸಿದರು ಎಂದು ತಿಳಿಸಿದರು.
ಎಸ್.ಎನ್.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ, ಕೆ.ಮಂಜಪ್ಪ, ಎಚ್.ಎಸ್.ಹರೀಶ್, ಎಚ್.ಎಸ್.ಧರಣೇಶ್, ನಂದಿನಿ ಮಲ್ಲಿಕಾರ್ಜುನ್, ಬಾರಂದೂರು ಪ್ರಕಾಶ್, ಮಲ್ಲಿಕಾಂಬ ವಿರೂಪಾಕ್ಷ, ಗಂಗಾ ಕುಬ್ಸದ್ ಇತರರಿದ್ದರು.