

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ದೇಶ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿಯೂ ಸುದ್ದಿಯಾಗಿದೆ. ಈ ಕುರಿತಾಗಿ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿವೆ. ಫೇಸ್ಬುಕ್, ವಾಟ್ಸ್ಆ್ಯಪ್ನಂತಹ ಅಪ್ಲಿಕೇಷನ್ಗಳಲ್ಲಿ ಸಾಕಷ್ಟು ದ್ವೇಷ ಸಂದೇಶಗಳು ವಿನಿಮಯವಾಗಿವೆ. ವಾಟ್ಸ್ಆ್ಯಪ್ನಲ್ಲಿ ವಿನಿಮಯವಾಗುತ್ತಿರುವ ದ್ವೇಷ ಸಂದೇಶಗಳಿಗೆ ಬ್ರೇಕ್ ಹಾಕುವ ಸಲುವಾಗಿ ದೆಹಲಿ ಸರ್ಕಾರ ಹೊಸದೊಂದು ಪ್ಲ್ಯಾನ್ ಮಾಡಿದೆ.
ನಿಮ್ಮ ವಾಟ್ಸ್ಆ್ಯಪ್ಗೆ ಯಾರಾದರೂ ದ್ವೇಷ ಸಂದೇಶವನ್ನು ಕಳುಹಿಸಿದರೆ, ನೀವು ಆ ಸಂದೇಶ ಕಳುಹಿಸಿದವರ ಅಥವಾ ಫಾರ್ವರ್ಡ್ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಮೇಲೆ ದೂರನ್ನು ದಾಖಲಿಸಬಹುದು. ಅಂಥವರ ವಿರುದ್ಧ ಸರ್ಕಾರ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.
ಈ ರೀತಿಯ ದೂರುಗಳನ್ನು ತೆಗೆದುಕೊಳ್ಳುವುದಕ್ಕೆಂದೇ ಹೊಸ ವಾಟ್ಸ್ಆ್ಯಪ್ ನಂಬರ್ ಒಂದನ್ನು ತೆರೆಯುವ ಚಿಂತನೆಯನ್ನು ದೆಹಲಿ ಸರ್ಕಾರ ನಡೆಸಿದೆ. ವಾಟ್ಸ್ಆ್ಯಪ್ನಲ್ಲಿ ಬರುವ ದೂರುಗಳನ್ನು ಅಧಿಕಾರಿಗಳು ಪರಿಶೀಲಿಸಿ, ಸತ್ಯಾಂಶ ಹೊಂದಿರುವ ದೂರುಗಳನ್ನು ಗಣನೆಗೆ ತೆಗೆದುಕೊಂಡು ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)