

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವ ಎರಡನೇ ದಿನವಾದ ಬುಧವಾರ ಧಾರ್ಮಿಕ ಪೂಜಾ ವಿಧಿವಿಧಾನಗಳು ಶಾಸ್ತ್ರೋತ್ರವಾಗಿ ನೆರವೇರಿತು. ಕರ್ತೃ ಗದ್ದುಗೆಯಲ್ಲಿ ನಂಜುಂಡೇಶ್ವರ ನಂದಿ ಹಾಗೂ ವಿನಾಯಕ ಮೂರ್ತಿಗಳ ಪ್ರತಿಷ್ಠಾಪನೆ ಬಳಿಕ ಮಹಾಮಂಗಳಾರತಿ ನೆರವೇರಿತು.
ಶಿವಯೋಗಿಗಳ ಗದ್ದುಗೆಯಲ್ಲಿ ಕೈಗೊಂಡಿದ್ದ ಹಸಿರುವಾಣಿ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಇದಕ್ಕೂ ಮುನ್ನ ಲಕ್ಷ ಬಿಲ್ವಾರ್ಚನೆ ಪೂಜೆ ನಡೆಯಿತು. ನಂತರ ಜೆಎಸ್‌ಎಸ್ ಶಾಲಾ ಮಕ್ಕಳಿಂದ ಸ್ನೇಹ ಸೌಹಾರ್ದ ಶಾಂತಿಗಾಗಿ ಪ್ರಾರ್ಥನಾ ಪಥಸಂಚಲನ ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.
ಮೈಸೂರಿನ ಹೊಸ ಮಠದ ಚಿದಾನಂದ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು. ಕಲಬುರಗಿಯ ಸೂಗೂರು ರುದ್ರಮುನೀಶ್ವರ ಮಠದ ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಂದೇಶ ಸಾರಿದರು.
ಸೋಮೇಶ್ವರನ ಸನ್ನಿಧಿಯಲ್ಲಿ ಅಷ್ಟೋತ್ತರ ಶತಕುಂಭಾಭಿಷೇಕ ಕೈಗೊಂಡು ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಸಹಸ್ರ ಕುಂಭೋತ್ಸವ, ಹಾಲರವಿ ಉತ್ಸವ, ನಡೆಯಿತು. ದೊಡ್ಡಮ್ಮತಾಯಿ ದೇವಾಲಯದಲ್ಲಿ ಕಲಶೋತ್ಸವ ನೆರವೇರಿತು.