

ಸೊರಬ: ಬಡವರಿಗಾಗಿ ಗುಣಮಟ್ಟದ ಔಷಧ ರಿಯಾಯಿತಿ ದರದಲ್ಲಿ ದೊರೆಯಲೆಂದು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರ ಮುಚ್ಚುವ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆನವಟ್ಟಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರಧಾನಮಂತ್ರಿ ಭಾರತೀಯ ಜನೌಷಧ ಯೋಜನೆಯಡಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಔಷಧಗಳನ್ನು ವಿತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಪಿಪಿಐ ಜತೆ 2016ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದಲ್ಲಿ 88 ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಎಸ್‌ಐಎಲ್‌ನಿಂದ ಜನೌಷಧ ಕೇಂದ್ರಗಳನ್ನು ನಡೆಸಲಾಗುತ್ತಿದೆ. 119 ಕೇಂದ್ರಗಳನ್ನು ವೈಯಕ್ತಿಕವಾಗಿ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ 207 ಆಸ್ಪತ್ರೆಗಳಲ್ಲಿ ಕೇಂದ್ರಗಳು ಯಶಸ್ವಿಯಾಗಿ ನಡೆಯುತ್ತಿವೆ. ಅನೇಕ ಜನರಿಗೆ ಉದ್ಯೋಗ ಕಲ್ಪಿಸಿದೆ. ಆದರೆ ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿರುವುದು ಅವೈಜ್ಞಾನಿಕ ಕಾರ್ಯಕ್ರಮ ಎಂದು ದೂರಿದರು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಾಜ್ಯ ಸರ್ಕಾರ ಉಚಿತವಾಗಿ ಔಷಧ ವಿತರಿಸುತ್ತಿರುವಾಗ ಹಣಕೊಟ್ಟು ಔಷಧ ಖರೀದಿಸುವ ಅವಶ್ಯಕತೆ ಇಲ್ಲ ಎಂಬ ಸ್ಪಷ್ಟನೆ ನೀಡುತ್ತ ಜನೌಷಧ ಕೇಂದ್ರಗಳ ಒಪ್ಪಂದ ರದ್ದುಗೊಳಿಸಿದೆ. ಕೂಡಲೇ ರಾಜ್ಯ ಸರ್ಕಾರ ಆದೇಶ ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್, ಶಕ್ತಿ ಕೇಂದ್ರದ ಅಧ್ಯಕ್ಷ ಕೊಟ್ರೇಶ್, ಗ್ರಾಪಂ ಮಾಜಿ ಸದಸ್ಯರಾದ ಉಮೇಶ್, ಶ್ರೀಧರ್ ಆಚಾರ್, ಕೃಷ್ಣಮೂರ್ತಿ, ಕೆರಿಯಪ್ಪ, ರಾಘವೇಂದ್ರ, ಶಿವಪ್ರಸಾದ್ ಕುಬ್ಸದ್, ಶಿವರಾಜ್, ರಾಜು, ಶಿವಣ್ಣ ಇತರರಿದ್ದರು.