2000ದ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ: ಪರಿಸ್ಥಿತಿ ಹತೋಟಿಯಲ್ಲಿದೆ ಎಂದ ಚೀನಾ

corona
Published on

ವುಹಾನ್​​: ಚೀನಾದಲ್ಲಿ ಕಾಣಿಸಿಕೊಂಡಿರುವ ಯಮರೂಪಿ ಕೊರೊನಾ ವೈರಸ್​ನಿಂದಾಗಿ ಸತ್ತವರ ಸಂಖ್ಯೆ ಬುಧವಾರದಂದು 2000ರ ಗಡಿ ದಾಟಿದೆ.

ಬುಧವಾರದಂದು ಬಂದಿರುವ ವರದಿಯ ಪ್ರಕಾರ ಫೆ.18ರಂದು ಕೊರೊನಾ ವೈರಸ್​ನಿಂದಾಗಿ ಒಟ್ಟು 132 ಜನರು ಮೃತರಾಗಿದ್ದಾರೆ. ಚೀನಾ ದೇಶದಲ್ಲೀಗ ಒಟ್ಟು 2000 ಜನರು ವೈರಸ್​ನಿಂದಾಗಿ ಮೃತ ಪಟ್ಟಿರುವುದು ವರದಿಯಾಗಿದೆ. ಒಂದೇ ದಿನದಲ್ಲಿ 1,693 ಜನರಲ್ಲಿ ಕೊರೊನಾ ಇರುವುದು ಪತ್ತೆಯಾಗಿದ್ದು ಕೊರೊನಾ ಪೀಡಿತರ ಸಂಖ್ಯೆ 74,000ಕ್ಕೆ ಏರಿದೆ.

ಚೀನಾದ ಹುಬೈ ನಗರದಲ್ಲಿ ಅತೀ ಹೆಚ್ಚು ಕೊರೊನಾ ವೈರಸ್​ ಪ್ರಕರಣಗಳು ದಾಖಲಾಗಿವೆ. ಇದೇ ನಗರದಲ್ಲಿ ಡಿಸೆಂಬರ್​ ತಿಂಗಳಿನಲ್ಲಿ ಮೊದಲ ವೈರಸ್​ ಕಾಣಿಸಿಕೊಂಡಿತ್ತು.

ಚೀನಾದ ಬಹುತೇಕ ಎಲ್ಲ ನಗರಗಳಲ್ಲೂ ಕಳೆದ ಒಂದು ವಾರದಿಂದ ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಚೀನಾ ದೇಶವು ವೈರಸ್​ ದಾಳಿಯನ್ನು ಹತೋಟಿಗೆ ತಂದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಈ ಕುರಿತಾಗಿ ಬ್ರಿಟಿಷ್​ ಪ್ರಧಾನಿಯೊಂದಿಗೆ ಫೋನ್​ನಲ್ಲಿ ಮಾತನಾಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​, "ವೈರಸ್​ ದಾಳಿಯು ಹತೋಟಿಗೆ ಬರುತ್ತಿರುವುದು ಕಾಣುತ್ತಿದೆ" ಎಂದು ಹೇಳಿದ್ದಾರೆ.

ಹುಬೈನ್ ವುಹಾನ್​ನ ಆಸ್ಪತ್ರೆಯ ನಿರ್ದೇಶಕರೊಬ್ಬರು ಮಂಗಳವಾರದಂದು ಕೊರೊನಾ ವೈರಸ್​ನಿಂದಾಗಿ ಮೃತಪಟ್ಟಿದ್ದು, ವೈರಸ್​ನಿಂದಾಗಿ ಮೃತಪಟ್ಟಿರುವ ಏಳನೇ ವೈದ್ಯಕೀಯ ಸಿಬ್ಬಂದಿ ಅವರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net