ರಾಜಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

Crime Logo
Published on

ಬೆಂಗಳೂರು: ನಗರದ ಸುಮ್ಮನಹಳ್ಳಿಯ ರಾಜಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯ ಹೆಸರು, ವಿಳಾಸ, ಗುರುತು ಪತ್ತೆಯಾಗಿಲ್ಲ. ಮೃತರು ಅಂದಾಜು ೫೫ ವರ್ಷದವರು ಇರಬಹುದು. ಸೋಮವಾರ ಬೆಳಗ್ಗೆ ೧೧.೩೦ಕ್ಕೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಬಳಿಕ ಆ ಮೃತದೇಹವನ್ನು ರಾಜಕಾಲುವೆಯಿಂದ ಮೇಲಕ್ಕೆ ತೆಗೆದು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಬಂದು ಕೆಲವು ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಅಪರಿಚಿತ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆಗೈದು ಬಳಿಕ ರಾಜಕಾಲುವೆಗೆ ಮೃತದೇಹ ಎಸೆದಿರುವ ಸಾಧ್ಯತೆಯಿದೆ. ಮೃತ ಮಹಿಳೆಯ ಗುರುತು ಪತ್ತೆಗೆ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net