ರಣರಂಗವು ಚೆಲ್ಲಾಪಿಲ್ಲಿಯಾಗಿರುವಾಗ ಆವರಿಸಿದ ಕತ್ತಲೆ

Shrirama
Published on

ಯುದ್ಧರಂಗದಲ್ಲಿ ಯುದ್ಧದ ಕೊನೆಯಲ್ಲಿ ಇರುವ ಭಯಾನಕ-ಬೀಭತ್ಸ ದೃಶ್ಯಗಳನ್ನು ಶ್ರೀ ವಸಿಷ್ಠರು ವರ್ಣಿಸುತ್ತಿದ್ದಾರೆ. ಅದನ್ನು ಓದಿದರೆ ನಾಟಕವನ್ನು ನೋಡಿದಾಗ ಉಂಟಾಗುವಂತೆ ಭಯ, ಭೀಭತ್ಸ ರಸಗಳು ಓದುಗನ ಮನಸ್ಸಿನಲ್ಲಿ ಉಂಟಾಗುತ್ತವೆ. ಶ್ರೀ ವಸಿಷ್ಠರೇ ಹೇಳಿರುವಂತೆ ಈ ದೃಶ್ಯಗಳನ್ನು ಲೀಲಾ ಮಹಾರಾಣಿಯು ಸೂಕ್ಷ್ಮರೂಪದಿಂದ ಇದ್ದುಕೊಂಡು ನೋಡುತ್ತಿದ್ದಾಳೆ. ಸಮಾಧಿಸ್ಥಿತಿಯ ಮೂಲಕ ಅವಳು ಆ ಸೂಕ್ಷ್ಮರೂಪವನ್ನು ಪಡೆದಿದ್ದಾಳೆ. ಆ ಸ್ಥಿತಿಯಲ್ಲಿ ದಿವ್ಯದೃಷ್ಟಿಯಿಂದ ಜಗತ್ತನ್ನು ನೋಡುವವರಿಗೆ ದುಃಖ, ಭಯ ಉಂಟಾಗುವುದಿಲ್ಲ. ಅಜ್ಞಾನದಿಂದ ಉಂಟಾದ ಶರೀರಾತ್ಮಭಾವ ಉಳ್ಳವರಿಗೆ ಭಯ, ದುಃಖ ಮುಂತಾದವು ಉಂಟಾಗುತ್ತವೆ. ಹಿಂದಿನ ಜನ್ಮದಲ್ಲಿ ಲೀಲಾ ಮಹಾರಾಣಿಯ ಪತಿಯಾಗಿದ್ದ ವಿದೂರಥನ ಚಕ್ರವರ್ತಿತ್ವದಲ್ಲಿ ನಡೆಯುತ್ತಿರುವ ಯುದ್ಧವನ್ನು ಲೀಲಾ ಮಹಾರಾಣಿ ನೋಡುತ್ತಿದ್ದಾಳೆ. ಆದರೂ ಅವಳಿಗೆ ಭಯ, ದುಃಖ ಆಗಲಿಲ್ಲ. ಆದ್ದರಿಂದ ಜಗತ್ತನ್ನು ನೋಡುವ ನಮ್ಮ ದೃಷ್ಟಿ ಜ್ಞಾನ ಸಾಧನೆ-ಸಮಾಧಿಗಳ ಮೂಲಕ ಬದಲಾಗಬೇಕೆಂಬುದು ಯೋಗವಾಸಿಷ್ಠದ ಪ್ರಧಾನ ಆಶಯ.

ಶ್ರೀ ವಸಿಷ್ಠರು ಯುದ್ಧದ ದಿನ ಸಂಜೆಯ ಪರಿಸ್ಥಿತಿಯನ್ನು ವರ್ಣಿಸುತ್ತ ಕೊನೆಯ ಹಂತಕ್ಕೆ ಬಂದಿದ್ದಾರೆ. ಮುಂದೆ ರಾತ್ರಿಯ ಪರಿಸ್ಥಿತಿಯ ವರ್ಣನೆ ಮತ್ತು ರಾತ್ರಿಯ ವೇಳೆಯಲ್ಲಿಯೇ ಲೀಲಾ ಮಹಾರಾಣಿ ಮತ್ತು ಶ್ರೀದೇವಿ ವಿದೂರಥನ ಅಂತಃಪುರವನ್ನು ಸೂಕ್ಷ್ಮರೂಪದಿಂದ ಪ್ರವೇಶಿಸುವಿಕೆ ಬರಲಿದೆ.

‘ಶ್ರೀರಾಮ! ಮರಣೋನ್ಮುಖರಾಗಿ ಬಿದ್ದಿರುವ ಸೈನಿಕರ ಸ್ಥಿತಿಯನ್ನು ವರ್ಣಿಸಲು ಶಬ್ದಗಳು ಸಾಲದು. ಆದರೆ ನಾಯಿ-ಕಾಗೆಗಳು ನೆಲಕ್ಕೆ ಬಿದ್ದ ಶರೀರಗಳ ಮಾಂಸವನ್ನು ಕಿತ್ತು ತಿನ್ನುತ್ತಿದ್ದವು. ಅಂತಹ ಶವಗಳ ಮಧ್ಯದಲ್ಲಿ ಮರಣೋನ್ಮುಖರಾದ, ಸ್ವಲ್ಪ ಮಾತ್ರ ಜೀವವಿರುವ ಸೈನಿಕರು ಬಿದ್ದಿದ್ದಾರೆ. ತಮ್ಮ ಪಕ್ಕದಲ್ಲಿರುವ ಶವಗಳನ್ನು ಕಿತ್ತು ತಿನ್ನಲು ನಾಯಿ-ಕಾಗೆಗಳು ಬಂದಿರುವುದನ್ನು ನೋಡಿ ಕಷ್ಟಪಟ್ಟು ತಲೆಯೆತ್ತಿ ‘ಎಲ್ಲಿ ಈ ನಾಯಿ, ಕಾಗೆಗಳು ತನ್ನನ್ನೂ ತಿನ್ನುತ್ತವೆಯೋ!’ ಎಂಬ ಆತಂಕದಿಂದ ನೋಡುತ್ತಿದ್ದರು.

ಒಂದೇ ಮಾಂಸದ ತುಂಡಿಗಾಗಿ ಮಾಂಸಾಹಾರಿ ಪಕ್ಷಿಗಳು ಪರಸ್ಪರ ಕಚ್ಚಾಡಿಕೊಳ್ಳುತ್ತ ಕೂಗುತ್ತಿದ್ದವು. ಹೀಗೆ ಕಚ್ಚಾಡಿಕೊಳ್ಳುತ್ತಿರುವ ಮಾಂಸಾಹಾರಿ ಪಕ್ಷಿಗಳ ಪೈಕಿ ಕೆಲವು ಪಕ್ಷಿಗಳು ಪೆಟ್ಟು ತಿಂದು ಸತ್ತು ಹೋದವು.’ ‘ಬೇರೆ ಬೇರೆ ರೀತಿಯಿಂದ ಮರಣ ಹೊಂದಿರುವ ಮತ್ತು ಬೇರೆ ಬೇರೆ ರೀತಿಯಲ್ಲಿ ಬಿದ್ದಿರುವ ಅಸಂಖ್ಯ ಕುದುರೆಗಳು, ಆನೆಗಳು, ಸೈನಿಕರು, ಸೇನಾನಾಯಕರು ಮತ್ತು ರಥಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕತ್ತರಿಸಲ್ಪಟ್ಟ ದೇಹಗಳಿಂದ ಮತ್ತು ಒಂಟೆಗಳಿಂದ ಹೊರಬರುತ್ತಿರುವ ರಕ್ತವು ಸಾಕ್ಷಾತ್ ನದಿಯಂತೆ ಹರಿಯುತ್ತಿದೆ. ರಕ್ತದಿಂದ ಸಿಂಪಡಿಸಲ್ಪಟ್ಟ ಇನ್ನೂ ಹಸಿಯಾಗಿಯೇ ಇರುವ ಆಯುಧಗಳೆಂಬ ಲತೆಗಳಿರುವ ಮೃತ್ಯುದೇವತೆಯ ಉದ್ಯಾನ ವನದಂತೆ ರಣಭೂಮಿಯು ತೋರುತ್ತಿತ್ತು. ಕಲ್ಪಾಂತ್ಯದಲ್ಲಿ ಪ್ರಳಯದ ಪ್ರಕ್ರಿಯೆ ಒಳಪಟ್ಟು ಮಹಾ ಪರ್ವತಗಳನ್ನು ಒಳಗೊಂಡ ಇಡೀ ಜಗತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಆ ಯುದ್ಧರಂಗವು ಅದೇ ರೀತಿಯಾಗಿ ಕಾಣುತ್ತಿತ್ತು.’

ಇಲ್ಲಿಂದ ಮುಂದೆ ಶ್ರೀ ವಸಿಷ್ಠರು ಅಂದು ರಾತ್ರಿಯ ವೇಳೆ ಯುದ್ಧರಂಗ ಹೇಗಿತ್ತೆಂಬುದನ್ನು ವರ್ಣಿಸುತ್ತಿದ್ದಾರೆ- ‘ಹಗಲು ಸಂಪೂರ್ಣ ಮುಗಿದಿದ್ದರಿಂದ ಸೂರ್ಯ ಅಸ್ತಂಗತನಾದನು. ಯುದ್ಧದಲ್ಲಿ ವೈರಿಗಳ ಅಸ್ತ್ರಗಳ ತೇಜಸ್ಸಿನಿಂದ ತನ್ನ ಪ್ರತಾಪವನ್ನೆಲ್ಲಾ ಕಳೆದುಕೊಂಡ ವೀರ ಯೋಧ ಮೈ ಎಲ್ಲಾ ರಕ್ತಮಯವಾಗಿದ್ದುಕೊಂಡು ಬಿದ್ದುಹೋಗುವಂತೆ, ಸ್ವಚ್ಛವಾದ ಆಕಾಶದಲ್ಲಿ ತನ್ನ ತಾಪವನ್ನೆಲ್ಲಾ ಕಳೆದುಕೊಂಡು ಮಂದ ಕಿರಣಗಳುಳ್ಳ ಮತ್ತು ರಕ್ತವರ್ಣಮಯನಾದ ಸೂರ್ಯನು, ಯಾರಿಂದಲೋ ಬೀಳಿಸಲ್ಪಟ್ಟವನಂತೆ, ಸಮುದ್ರದಲ್ಲಿ (ಸಮುದ್ರವಿರುವ ಪಶ್ಚಿಮ ದಿಕ್ಕಿನಲ್ಲಿ) ಮುಳುಗಿ ಹೋದನು. ಸೂರ್ಯನೆಂಬ ವೀರಯೋಧನ ತಲೆ ಕಡಿಯಲ್ಪಟ್ಟು ಬಿದ್ದಿರಲು, ಪೂರ್ವದಿಕ್ಕಿನ ಆಕಾಶವೆಂಬ ದರ್ಪಣದಲ್ಲಿ ರಣರಂಗದ ಕೆಂಪು ಬಣ್ಣವೇ ಪ್ರತಿಬಿಂಬಿತವಾಗುತ್ತಿವೆಯೋ ಎಂಬಂತೆ ಸಂಧ್ಯಾಕಾಲದ ಕೆಂಪು ಕಿರಣಗಳು ಕಾಣಿಸಿಕೊಂಡವು.’

‘ಸೂರ್ಯಾಸ್ತವಾಗುತ್ತಿದಂತೆಯೇ ಪ್ರಳಯ ಸಾಗರದ ನೀರಿನ ಪ್ರವಾಹದಂತೆ, ಭೂಮಿ- ಪಾತಾಳ- ಆಕಾಶ- ದಿಕ್ಕುಗಳಿಂದ ಬೇತಾಳಗಳು ಅಲ್ಲಿ ಆಗಮಿಸಿದವು. ಎಲ್ಲ ದಿಕ್ಕುಗಳಿಂದಲೂ ಏಕಕಾಲದಲ್ಲಿ ಬಂದಿದ್ದರಿಂದ ಅವು ವಲಯದ ಆಕಾರದಲ್ಲಿ ಯುದ್ಧರಂಗವನ್ನು ಸುತ್ತುವರಿದಂತೆ ಕಾಣುತ್ತಿದ್ದವು. ಹೊರಬರುತ್ತಿದ್ದಂತೆಯೇ ಅವು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸುತ್ತಾ ಬರುತ್ತಿದ್ದವು. ಎತ್ತರದ ಕಾರಣದಿಂದ ಗಾಳಿಯಲ್ಲಿ ಶಬ್ದ ಮಾಡುತ್ತಿರುವ ತಾಳೆಯ ಮರಗಳಂತೆ ಅವು ಕಾಣಿಸುತ್ತಿದ್ದವು. ಹಾಗೆಯೇ ಸ್ವಲ್ಪ ಹೊತ್ತಿನಲ್ಲಿ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿಕೊಂಡವು. ದಿವಸವೆಂಬ ಗಜೇಂದ್ರನ ತಲೆಯಲ್ಲಿ ಅತ್ಯಂತ ಹರಿತವಾದ ಕತ್ತಲೆಯೆಂಬ ಖಡ್ಗದಿಂದ ಘಾಸಿಗೊಳಿಸಿದಾಗ ಹೊರಚೆಲ್ಲಿರುವ ರಕ್ತದಿಂದ ಕೆಂಪಾಗಿರುವ ಮೌಕ್ತಿಕಗಳು ಹರಡಿರುವಂತೆ ಆ ನಕ್ಷತ್ರದ ಸಮೂಹವು ಕಾಣಿಸುತ್ತಿತ್ತು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net