

ತೀರ್ಥಹಳ್ಳಿ: ಮಾನವೀಯ ಗುಣಗಳೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಸಾಂಸ್ಕೃತಿಕ ಕ್ಷೇತ್ರಕ್ಕಿದೆ. ಸಮಾಜವನ್ನು ಒಗ್ಗೂಡಿಸುವ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯೆ, ನಟಿ ಉಮಾಶ್ರೀ ಹೇಳಿದರು.
ಪಟ್ಟಣ ಪಂಚಾಯಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿನ್ನೆಲೆ ಗಾಯಕಿಯಾಗಿದ್ದ ನಾನು ನಟಿಯಾಗಿ ಹಾಗೂ ರಾಜಕೀಯವಾಗಿಯೂ ಈ ಮಟ್ಟಕ್ಕೆ ಬೆಳೆಯುವುದಕ್ಕೆ ರಂಗಭೂಮಿ ಕಾರಣ ಎಂದರು.
ರಾಜಕೀಯವಾಗಿ ದೊರೆಯುವ ಗೌರವಕ್ಕಿಂತ ಬೇರೆ ಬೇರೆ ಸಿದ್ಧಾಂತಗಳನ್ನು ಹೊಂದಿರುವ ಗಣ್ಯರು ಒಂದಾಗಿ ನೀಡುವ ನಾಗರಿಕ ಸನ್ಮಾನ ದೊಡ್ಡದು. ರಾಜಕೀಯವಾಗಿ ಈ ಕ್ಷೇತ್ರದ ಹಿರಿಯ ರಾಜಕಾರಣಿಗಳಾದ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಜತೆ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಉಮಾಶ್ರೀ ಅವರು ನಾಡಿನ ಕಲಾಕ್ಷೇತ್ರದ ಹೆಗ್ಗುರುತು. ಅವರಲ್ಲಿರುವ ಪ್ರತಿಭೆ ಹಾಗೂ ಪರಿಶ್ರಮದಿಂದಲೇ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಅವರಿಂದ ಸಂದಿರುವ ಸೇವೆ ಅನುಕರಣೀಯ. ಸದನದಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ ಹಾಗೂ ನಾನು ಕೂಡ ಅವರ ್ಯಾನ್ ಆಗಿದ್ದೇನೆ ಎಂದರು.
ಇದೇ ವೇಳೆ ಊರಿನ ವಿವಿಧ ಸಂಘಟನೆಗಳು ಉಮಾಶ್ರೀ ಅವರನ್ನು ಗೌರವಿಸಿದವು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ, ಸದಸ್ಯ ಸಂದೇಶ್ ಜವಳಿ ಮಾತನಾಡಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್ ಇದ್ದರು.