

* ಕಿರುವಾರ ಎಸ್.ಸುದರ್ಶನ್ ಕೋಲಾರ
ಕೆಜಿಎಫ್ ತಾಲೂಕಿನಲ್ಲಿ ಅನರ್ಹರಿಗೆ ಸಾಗುವಳಿ ಚೀಟಿಗಳನ್ನು ವಿತರಣೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರವು ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ದರಖಾಸ್ತು ಸಮಿತಿಯಿಂದ ಭೂ ಮಂಜೂರಿ ಪಡೆಯಬೇಕಾದರೆ ಹಲವು ನಿಯಮಗಳ ಪಾಲನೆ ಮಾಡಬೇಕು. ಆದರೆ ಕೆಜಿಎಫ್ ತಾಲೂಕು ಕಚೇರಿಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಅನರ್ಹರಿಗೆ ಸಾಗುವಳಿ ಚೀಟಿ ವಿತರಿಸಿದ್ದಾರೆ. ಇದರಲ್ಲಿ ಅಧಿಕಾರಿಗಳೇ ತಪು$್ಪ ಎಸಗಿದ್ದಾರೆ ಎಂಬುದು ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.
2018ರಲ್ಲಿ ತಹಸೀಲ್ದಾರ್ ಆಗಿದ್ದ ಕೆ.ಎನ್.ಸುಜಾತಾ, ಶಿರಸ್ತೇದಾರ್ ಕೆ.ಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಆರ್.ಪವನ್ಕುಮಾರ್ ವಿರುದ್ಧ ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ. ಈ ಹಗರಣದಲ್ಲಿ ತಹಸೀಲ್ದಾರ್ಗಳಾಗಿದ್ದ ದಯಾನಂದ್, ವಿಜಯಣ್ಣ, ವಿಷಯ ನಿರ್ವಾಹಕ ಬಾಲಾಜಿ ಸಹ ಭಾಗಿಯಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅವರ ವಿರುದ್ಧವೂ ದೂರು ದಾಖಲಾಗಿದ್ದು, ತನಿಖೆ ನಡೆಸದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗುತ್ತಿದೆ.
ಈ ಹಗರಣ ನಡೆದಿರುವುದು ಕೆಜಿಎ್ ಕ್ಷೇತ್ರವು ಬಂಗಾರಪೇಟೆ ತಾಲೂಕು ವ್ಯಾಪ್ತಿಯಲ್ಲಿದ್ದಾಗ. 2014ರಲ್ಲಿ ವೈ.ರಾಮಕ್ಕ ಶಾಸಕರಾಗಿದ್ದಾಗ ಕೆಜಿಎಫ್ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ದರಖಾಸ್ತು ಸಮಿತಿ ರಚನೆಯಾಗಿರಲಿಲ್ಲ. 2017ರ ಸೆಪ್ಟೆಂಬರ್ 15 ರಂದು ಪ್ರಥಮ ಸಭೆ ನಡೆದಿದೆ. ಆಗ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗಿಲ್ಲ. ಆದ್ದರಿಂದ ನಡವಳಿಗಳನ್ನು ದಾಖಲು ಮಾಡಲು ಸಾಧ್ಯವಾಗಿರಲಿಲ್ಲ. ನಂತರ 2ನೇ ಸಭೆಯು 2017ರ ಡಿ.22ರಂದು ಹಾಗೂ 3ನೇ ಸಭೆ 2018ರ ಜ.19ರಂದು ನಡೆದಿದೆ. ಕೊನೆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಮಿತಿಯ ಅಧ್ಯೆಯೂ ಆಗಿದ್ದ ವೈ.ರಾಮಕ್ಕ ಅವರು ಮೌಖಿಕವಾಗಿ ಸಲಹೆ ಸೂಚನೆಗಳನ್ನು ನೀಡಿದ್ದರೇ ಹೊರತು ಯಾವುದೇ ವಿಷಯಗಳ ತೀರ್ಮಾನ ಮಾಡಿರಲಿಲ್ಲ. ಸರ್ಕಾರವು ಕೆಜಿಎ್ ಅನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ 2018 ಜ.1ರಿಂದ ಜಾರಿಯಾಗುವಂತೆ ಆದೇಶಿಸಿತು. ಅದರ ಪ್ರಕಾರ ತಾಲೂಕು ಚಟುವಟಿಕೆಗಳು ಶುರುವಾದವು. ರಾಮಕ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳನ್ನು ನಂತರ ಅಧಿಕಾರಕ್ಕೆ ಬಂದ ಶಾಸಕಿ ರೂಪಕಲಾ ಅವರು ನಡೆಸಿದ ಸಭೆಯಲ್ಲೂ ಪ್ರಸ್ತಾಪಿಸದೆ ಅಕ್ರಮವಾಗಿ ಅನುಮೋದನೆ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
* ಸೇವೆಯಿಂದ ಅಮಾನತುಗೊಳಿಸಲು ಒತ್ತಾಯ
ಹಿಂದಿನ ಸಭೆಯ ನಡವಳಿಗಳನ್ನು ಮುಂದಿನ ಸಭೆಯಲ್ಲಿ ಓದಿ ಅನುಮೋದಿಸಬೇಕಾಗಿತ್ತು, ಆದರೆ ಅಧಿಕಾರಿಗಳು ಅದ್ಯಾವುದನ್ನೂ ಮಾಡಿಲ್ಲ. ಅನಧಿಕೃತವಾಗಿ 229 ಅರ್ಜಿಯನ್ನು ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ, ಜತೆಗೆ ರಾಮಕ್ಕ ಅವರ ಸಹಿಯನ್ನು ಸಹ ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಲೋಕಾಯುಕ್ತ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳು ತಪು$್ಪ ಎಸಗಿರುವುದು ಕಂಡು ಬಂದಿದೆ. ಇದರಲ್ಲಿ ಸುಜಾತಾ, ಪವನ್, ಸುರೇಶ್ ಜತೆಗೆ ಇನ್ನೂ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ. 229 ಮಂದಿಗೆ 523 ಎಕರೆಯಷ್ಟು ಮಂಜೂರು ಮಾಡಿ ಸಾಗುವಳಿ ಚೀಟಿ ವಿತರಣೆ ಮಾಡಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಬೇಕು. ಈಗಾಗಲೇ ಸಾಗುವಳಿ ಚೀಟಿ ವಿತರಣೆ ಮಾಡಿರುವುದನ್ನು ರದ್ದುಪಡಿಸಿ, ಅರ್ಹರಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
* ಅಧಿಕಾರಿಗಳು ಎಸಗಿರುವ ಲೋಪಗಳೇನು...?
ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮೀಕರಣ ಸಮಿತಿ ಅಧ್ಯೆ ವೈ.ರಾಮಕ್ಕ ಅವರ ಸಹಿ ನಕಲು ಮಾಡಿರುವುದು, ಅನುಮೋದನೆ ಪಡೆಯದೇ ಅನಧಿಕೃತವಾಗಿ 229 ಅರ್ಜಿಗಳ ವಿವರಗಳನ್ನು ನಡಾವಳಿ ಪುಸ್ತಕದಲ್ಲಿ ಸೇರಿಸಿರುವುದು, ಒಂದೇ ಕುಟುಂಬದ 2&3 ಸದಸ್ಯರಿಗೆ ಸಾಗುವಳಿ ಚೀಟಿ ವಿತರಣೆ, ಹೊರ ರಾಜ್ಯದವರಿಂದಲೂ ಅರ್ಜಿ ಸ್ವೀಕರಿಸಿ ಸಾಗುವಳಿ ಚೀಟಿ ವಿತರಣೆ ಮಾಡಿರುವುದು ಸೇರಿ ಹತ್ತಾರು ಲೋಪಗಳನ್ನು ಎಸಗಿದ್ದಾರೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ಸಿ.ವೆಂಕಟಾಚಲಪತಿ ಆರೋಪಿಸಿದ್ದಾರೆ.
"ಅಧಿಕಾರಿಗಳ ವಿರುದ್ಧ ದೂರು ದಾಖಲಲಾಗಿದ್ದು, ಈ ಸಂಬಂಧ ಸಮಿತಿ ಸದಸ್ಯರಾಗಿದ್ದ ನನ್ನನ್ನೂ ಲೋಕಾಯುಕ್ತರು ವಿಚಾರಣೆ ನಡೆಸಿದರು. ಅವರು ಕೇಳುತ್ತಿದ್ದ ವಿಷಯಗಳ ಬಗ್ಗೆ ನನಗೆ ಅಶ್ಚರ್ಯವಾಯಿತು. ಬೆಂಗಳೂರು&ಚೆನ್ನೆ$ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಬಂಗಾರಪೇಟೆ, ಕೆಜಿಎ್ ಭಾಗದಲ್ಲಿ ಭೂಮಿಗೆ ಬೇಡಿಕೆ ಹೆಚ್ಚಾಗಿದ್ದು, ಭೂ ಅಕ್ರಮ ಚಟುವಟಿಕೆಗಳು ನಡೆಯಲು ಶುರುವಾಗಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
ಕೋಟ್...
ತಹಸೀಲ್ದಾರ್ ಕೆ.ಎನ್.ಸುಜಾತಾ ಸೇರಿ ಇನ್ನಿಬ್ಬರ ವಿರುದ್ಧ ಎ್ಐಆರ್ ದಾಖಲಾಗಿದ್ದು, ಬಂಗಾರಪೇಟೆ ತಹಸೀಲ್ದಾರ್ ಆಗಿ ಸುಜಾತಾ ಜ.1ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಸಾಕ್ಷ$್ಯಗಳನ್ನು ನಾಶಪಡಿಸುವ ಸಾಧ್ಯತೆಯಿರುತ್ತದೆ. ಪ್ರಕರಣದ ತನಿಖೆ ಮುಗಿಯುವ ತನಕ ಅವರನ್ನು ಅಮಾನತು ಮಾಡಬೇಕು.
- ವೆಂಕಟೇಶ್ ಗೌಡ, ದೂರುದಾರ, ಗಂಗದೊಡ್ಡಿ ಗ್ರಾಮ
ಕೋಟ್..
ಈಗಾಗಲೇ ನೀಡಿರುವ ಸಾಗುವಳಿ ಚೀಟಿಗಳನ್ನು ರದ್ದುಗೊಳಿಸಬೇಕು, ಅರ್ಹರನ್ನು ಗುರುತಿಸಿ ಸಾಗುವಳಿ ಚೀಟಿ ವಿತರಿಸಬೇಕು.
- ವೆಂಕಟಾಚಲಪತಿ, ದರಖಾಸ್ತು ಸಮಿತಿ ಮಾಜಿ ಸದಸ್ಯ, ಕೆಜಿಎಫ್