

Firing: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನ ಜನಪ್ರಿಯ ಮಾರುಕಟ್ಟೆಯೊಂದರಲ್ಲಿ ದುಷ್ಕರ್ಮಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿ ಐವರನ್ನು ಕೊಂದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ(ಜು. 28) ನಡೆದಿದೆ.
ಓರ್ ಟು ಕೋರ್ ಎಂಬ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಳಿಕ ದುಷ್ಕರ್ಮಿ ಅದೇ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಉದ್ದೇಶದ ಬಗ್ಗೆ ಬ್ಯಾಂಕಾಕ್ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸಾಮೂಹಿಕ ಗುಂಡಿನ ದಾಳಿ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಪ್ರಸ್ತುತ ಗಡಿ ಘರ್ಷಣೆಗಳ ನಡುವಿನ ಸಂಬಂಧದಿಂದಾಗಿದೆಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಮುಖ್ಯಸ್ಥರು ಹೇಳಿದರು.
ಥೈಲ್ಯಾಂಡ್‌ನಲ್ಲಿ ಗುಂಡಿನ ದಾಳಿಗಳ ಏರಿಕೆ
ಕಳೆದ ಕೆಲವು ವರ್ಷಗಳಿಂದ ಥಾಯ್ಲೆಂಡ್ನಲ್ಲಿ ಸಾಮೂಹಿಕ ಗುಂಡಿನ ದಾಳಿಯಂತಹ ಪ್ರಕರಣಗಳು ವ್ಯಾಪಕವಾಗಿ ಕಂಡು ಬಂದಿವೆ. ಥಾಯ್ಲೆಂಡ್ನ ಥಾಂಗ್ ಎಂಬ ಜಿಲ್ಲೆಯಲ್ಲಿ 33 ವರ್ಷ ವ್ಯಕ್ತಿಯೊಬ್ಬ ಇತ್ತೀಚೆಗೆ ಗುಂಡಿನ ದಾಳಿ ನಡೆಸಿ ಇಬ್ಬರು ಮಹಿಳೆಯರು ಸೇರಿ ಮೂವರನ್ನು ಹತ್ಯೆ ಮಾಡಿದ್ದನು. ವಾಟ್ ಯಾಂಗ್ ಸವಾಂಗ್ ಅರೋಮ್ ಶಾಲೆಯಿಂದ 50 ಮೀಟರ್ ದೂರದಲ್ಲಿ ಗುಂಡಿನ ದಾಳಿ ನಡೆದಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು.
2022ರ ಅಕ್ಟೋಬರ್ ರಲ್ಲಿಈಶಾನ್ಯ ಥೈಲ್ಯಾಂಡ್‌ನ ಮಕ್ಕಳ ಆರೈಕೆ ಕೇಂದ್ರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 24 ಮಕ್ಕಳು ಸೇರಿದಂತೆ ಸುಮಾರು 36 ಜನರು ಮೃತಪಟ್ಟ ಭೀಕರ ಘಟನೆ ನಡೆದಿತ್ತು. ಅದೇ ರೀತಿ 2023ರ ಅಕ್ಟೋಬರ್ನಲ್ಲಿ ಸಿಯಾಮ್ ಪ್ಯಾರಾಗಾನ್ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರನ್ನು ಕೊಂದು ಹಲವಾರು ಜನರನ್ನು ಗಾಯಗೊಳಿಸಿದ್ದಕ್ಕಾಗಿ 14 ವರ್ಷದ ಬಾಲಕನನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್)