ಶಾಸಕ ಸತೀಶ್ ಸೈಲ್‌ಗೆ ಶಿಕ್ಷೆ ಪ್ರಕಟ ಕಾಯ್ದಿರಿಸಿದ ಕೋರ್ಟ್

satish-sail
Published on

ಬೆಂಗಳೂರು: ಕಾರವಾರದ ಬೇಲೆಕೇರಿ ಬಂದರಿನಲ್ಲಿ ಅದಿರು ಕಳ್ಳತನ ಪ್ರಕರಣ ಸಂಬಂಧ ಕಾರವಾರ ಶಾಸಕ ಸತೀಶ್ ಸೈಲ್ ಸೇರಿ ಇತರ ಅಪರಾಧಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿಕ್ಷೆ ಪ್ರಮಾಣದ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದೆ.

ಶುಕ್ರವಾರ ಸಿಬಿಐ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ, ಅಪರಾಧಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿದ್ದಾರೆ. ಗರಿಷ್ಠ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

ಮತ್ತೊಂದೆಡೆ, ಸೈಲ್ ಪರ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ, ವಾದ ಮಂಡಿಸಿದರು. ಸತೀಶ್ ಅವರಿಗೆ ಅನಾರೋಗ್ಯದ ಸಮಸ್ಯೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿ ಜಾಮೀನು ಪಡೆದುಕೊಂಡಿದ್ದರು. ಕಳ್ಳತನ, ಭ್ರಷ್ಟಾಚಾರ ಕಾಯ್ದೆಯಡಿ ಗರಿಷ್ಠ ಶಿಕ್ಷೆ 3 ವರ್ಷಗಳಾಗಿದೆ. ಆದ್ದರಿಂದ 3 ವರ್ಷಕ್ಕಿಂತಲೂ ಕನಿಷ್ಠ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು. ಅಲ್ಲದೆ, ಶಾಸಕರ ಅನಾರೋಗ್ಯ ಸಂಬಂಧ ವೈದ್ಯಕೀಯ ದಾಖಲೆ ಪತ್ರಗಳನ್ನು ಕೋರ್ಟ್‌ಗೆ ಸಲ್ಲಿಸಿದರು. ಅವರನ್ನು ಕಸ್ಟಡಿಗೆ ಪಡೆಯದಂತೆ ವಕೀಲರು ಮನವಿ ಮಾಡಿದ್ದರು. ಒಮ್ಮೆ ತೀರ್ಪು ನೀಡಿದ ಮೇಲೆ ಇದಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು.

ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ.ಸಂತೋಷ್ ಗಜಾನನ ಭಟ್ ಗುರುವಾರ ತೀರ್ಪು ನೀಡಿದ್ದರು. ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿದ್ದರು. ದೋಷಿಗಳೆಂದು ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಸಕ ಸತೀಶ್ ಸೈಲ್, ಬಂದರು ಅಧಿಕಾರಿ ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪನಿಯ ಮಾಲೀಕ ಪ್ರೇಮ್ ಚಂದ್ ಗರ್ಗ, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‌ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪನಿ ಮಾಲೀಕ ಚೇತನ್ ಎಂಬುವರನ್ನು ಬಂಧಿಸಿ ಪರಪ್ಪನ ಕಾರಾಗೃಹಕ್ಕೆ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net