ಜಲ ಸಾರಿಗೆಗೆ ಆದ್ಯತೆ: ದೇಶದ ಪ್ರಥಮ ಜಲ ಮೆಟ್ರೋ ಇಂದು ಲೋಕಾರ್ಪಣೆ

Metro Ed
Published on

ರಾಜಧಾನಿ ತಿರುವನಂತಪುರದ ನಂತರ ಕೇರಳದ ಎರಡನೇ ಅತಿದೊಡ್ಡ ನಗರ ಹಾಗೂ ದೇಶದ ಪ್ರಮುಖ ಬಂದರುಗಳಲ್ಲಿ ಒಂದಾದ ಕೊಚ್ಚಿ ಅಥವಾ ಕೊಚಿನ್ ಮಹಾನಗರದಲ್ಲಿ ಇಂದು ಐತಿಹಾಸಿಕ ಯೋಜನೆಯೊಂದಕ್ಕೆ ಚಾಲನೆ ದೊರೆಯಲಿದೆ. ದೇಶದ ಮೊಟ್ಟಮೊದಲ ಜಲ ಮೆಟ್ರೋ ಸಾರಿಗೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇಂತಹ ವಿಶಿಷ್ಟ ನಗರ ಜಲ ಸಾರಿಗೆ ವ್ಯವಸ್ಥೆ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದಲ್ಲಿಯೇ ಮೊದಲನೆಯದೆಂಬುದು ವಿಶೇಷ.

ವಿದ್ಯುತ್ ಚಾಲಿತ ದೋಣಿಗಳನ್ನು ಈ ಮೆಟ್ರೋದಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಪರಿಸರಸ್ನೇಹಿ ಯೋಜನೆಯಾಗಿಯೂ ಇದು ಗಮನಸೆಳೆಯುತ್ತದೆ. ಕೇರಳ ರಾಜ್ಯವು ಬಹುತೇಕವಾಗಿ ಕರಾವಳಿ ಪ್ರದೇಶವನ್ನು ಒಳಗೊಂಡಿದೆ. ಹೀಗಾಗಿ, ಜಲ ಸಾರಿಗೆಯಿಂದ ಹಿಂದಿನಿಂದಲೂ ಪ್ರಭಾವಿತವಾಗಿದೆ. ಇಲ್ಲಿನ ಜನರು 20ನೇ ಶತಮಾನದಲ್ಲಿ ಸರಕುಗಳನ್ನು ಮಾರಾಟ ಮಾಡುವುದಕ್ಕಾಗಿ ಸಣ್ಣ ದೋಣಿಗಳನ್ನು ಸಾರಿಗೆಯಾಗಿ ಬಳಸುತ್ತಿದ್ದರು. ಹೊಸ ರಸ್ತೆಗಳು, ರೈಲು ಮಾರ್ಗ ಮತ್ತು ಸೇತುವೆಗಳು ನಿರ್ವಣಗೊಂಡಂತೆ ಕ್ರಮೇಣವಾಗಿ ರಸ್ತೆ ಆಧಾರಿತ ಸಾರಿಗೆಗೆ ಬದಲಾವಣೆಗೊಂಡರು. ಈಗಲೂ ಕೆಲವು ಸ್ಥಳೀಯರು ಒಳನಾಡಿನ ಜಲಮಾರ್ಗದ ಮೂಲಕ ಪ್ರಯಾಣಿಸುತ್ತಾರೆ.

ಭಾರತವು ಒಂದು ಪರ್ಯಾಯ ದ್ವೀಪವಾಗಿದ್ದರೂ ಜಲ ಸಾರಿಗೆಯ ಅವಲಂಬನೆ ಹಾಗೂ ಪ್ರಾಮುಖ್ಯತೆ ನಗಣ್ಯವಾಗಿದೆ. ನದಿಗಳು, ಸರೋವರಗಳು, ಕೃತಕ ಕಾಲುವೆಗಳ ಮೂಲಕ ಆಂತರಿಕವಾಗಿ ಹಡಗು ಅಥವಾ ದೋಣಿಗಳಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ಒಳನಾಡಿನ ಜಲಸಾರಿಗೆ ಕೂಡ ಭಾರತದಲ್ಲಿ ಅಷ್ಟಕ್ಕಷ್ಟೇ. ಚೀನಾ, ರಷ್ಯಾ, ಬ್ರೆಜಿಲ್ ಮುಂತಾದವುಗಳು ಹೆಚ್ಚಿನ ಪ್ರಮಾಣದಲ್ಲಿ ಒಳನಾಡಿನ ಜಲಸಂಚಾರ ಮಾರ್ಗಗಳನ್ನು ಹೊಂದಿರುವ ಪ್ರಪಂಚದ ಪ್ರಮುಖ ರಾಷ್ಟ್ರಗಳಾಗಿವೆ. ಚೀನಾದಲ್ಲಿ 1 ಲಕ್ಷ 10 ಸಾವಿರ ಕಿ.ಮೀ.ಗಿಂತಲೂ ಅಧಿಕ ಒಳನಾಡು ಜಲಸಂಚಾರ ಮಾರ್ಗವಿದ್ದರೆ, ಭಾರತದಲ್ಲಿ ಇದರ ಪ್ರಮಾಣ 16 ಸಾವಿರ ಕಿ.ಮೀ. ಮಾತ್ರ. ಒಳನಾಡು ಜಲಸಾರಿಗೆ ಯಶ ಕಾಣಬೇಕಾದರೆ ಜಲಮಾರ್ಗಗಳು ಆಳವಾಗಿ ಮತ್ತು ಸಾರ್ವಕಾಲಿಕವಾಗಿರಬೇಕು. ಜಲವು ಸಮೃದ್ಧಿಯಾಗಿರಬೇಕು. ಮಳೆಗಾಲದಲ್ಲಿ ಪ್ರವಾಹರಹಿತವಾಗಿರಬೇಕು. ಬೇಸಿಗೆಯಲ್ಲಿ ನೀರಿನ ಮಟ್ಟ ಇಳಿಮುಖವಾಗಬಾರದು. ಚಳಿಗಾಲದಲ್ಲಿ ನೀರು ಹೆಪು್ಪಗಟ್ಟಬಾರದು.

ಆದರೆ, ಭಾರತದಲ್ಲಿ ನದಿ ವ್ಯವಸ್ಥೆಯ ಜಾಲಗಳು ಪ್ರಾಕೃತಿಕ ನಿಯಮಗಳಿಗೆ ಒಳಪಟ್ಟಿದ್ದು, ಋತುಕಾಲಿಕ ಬದಲಾವಣೆಗೆ ಆಸ್ಪದ ಮಾಡಿಕೊಡುತ್ತವೆ. ಹೀಗಾಗಿ, ಸಾಕಷ್ಟು ನದಿ ಮಾರ್ಗಗಳು ಪೂರ್ಣಪ್ರಮಾಣದಲ್ಲಿ ಸಂಚಾರಕ್ಕೆ ಅನುಕೂಲಕರವಾಗಿಲ್ಲ. ಜಲ ಸಾರಿಗೆಯನ್ನು ಸೂಕ್ತವಾಗಿ ಬಳಸಿಕೊಂಡರೆ ಹಲವಾರು ಅನುಕೂಲ ಹಾಗೂ ಲಾಭಗಳಿವೆ. ದೊಡ್ಡ ಪ್ರಮಾಣದ ಸರಕನ್ನು ಕಡಿಮೆ ಖರ್ಚಿನಲ್ಲಿ ರವಾನಿಸಲು ಸಾಧ್ಯವಾಗುತ್ತದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಖನಿಜ, ತೈಲ, ಕಲ್ಲಿದ್ದಲು, ಆಹಾರ ಪದಾರ್ಥಗಳು, ಕೃಷಿ ಉಪಕರಣಗಳು ಮೊದಲಾದವನ್ನು ಸಾಗಿಸಲು ಜಲಮಾರ್ಗವು ಸೂಕ್ತ. ಜಲಸಾರಿಗೆಯ ವಿಶೇಷವೆಂದರೆ, ಮಾರ್ಗವನ್ನು ರೂಪಿಸಲು ಯಾವುದೇ ವೆಚ್ಚ ತಗುಲದಿರುವುದು. ಹೀಗಾಗಿ, ಸೂಕ್ತ ಮಾರ್ಗಗಳನ್ನು ಗುರುತಿಸಿ ಒಳನಾಡು ಜಲ ಸಾರಿಗೆ ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಚ್ಚಿ ಜಲ ಮೆಟ್ರೋ ಯೋಜನೆ ಮುನ್ನುಡಿ ಬರೆಯುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net