

ಬೆಂಗಳೂರು: ಚಂದ್ರಯಾನ 3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಗ್ರೀಸ್ನ ರಾಜಧಾನಿ ಅಥೇನ್ಸ್ನಿಂದ ಹೊರಟು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿರುವ ಪ್ರಧಾನಿ ಮೋದಿ, ಇಸ್ರೋ ಕಚೇರಿಯತ್ತ ತೆರಳುವ ಮುನ್ನ ಎಚ್ಎಎಲ್ ವಿಮಾನ ನಿಲ್ದಾಣದ ಮುಂಭಾಗ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ್ ಮಾತಾಕಿ ಜೈ, ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು ಪ್ರಧಾನಿ ಮೋದಿ ಘೋಷಣೆ ಕೂಗಿದರು. ಇದಕ್ಕೆ ಜನರು ಸಹ ಧ್ವನಿಗೂಡಿಸಿದರು. ಬಳಿಕ ಮಾತು ಆರಂಭಿಸಿದ ಪ್ರಧಾನಿ, ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಜನತೆಯ ದರ್ಶನವಾಗಿದೆ. ಇಡೀ ಪ್ರಪಂಚದಾದ್ಯಂತ ವಿಜ್ಞಾನವನ್ನು ನೋಡುವವರು ಹಾಗೂ ಮಾನವತಾವಾದಿಗಳು ನಮ್ಮನ್ನು ಶ್ಲಾಘಿಸಿದ್ದಾರೆ. ನಾನು ವಿದೇಶದಲ್ಲಿದ್ದೆ, ನಾನು ಭಾರತಕ್ಕೆ ಹೋಗೊದಿದ್ರೆ ಮೊದಲು ಬೆಂಗಳೂರಿಗೆ ಭೇಟಿ ನೀಡುವುದು ಎಂದು ತೀರ್ಮಾನ ಮಾಡಿದೆ. ವಿಜ್ಞಾನಿಗಳನ್ನು ಅಭಿನಂಧಿಸಲು ಬೆಂಗಳೂರಿಗೆ ಆಗಮಿಸಿದೆ ಎಂದರು.
ದೇಶ ಇಂದು ಬೆಳಗುತ್ತಿದೆ. ಅದು ಬೆಂಗಳೂರಿನಲ್ಲಿ ಕಾಣುತ್ತಿದೆ. ಗ್ರೀಸ್, ಜೋಹಾನ್ಸ್‌ಬರ್ಗ್‌ನಲ್ಲಿಯೂ ಅದು ಕಾಣುತ್ತಿದೆ. ವಿಜ್ಞಾನದಲ್ಲಿ ವಿಶ್ವಾಸ ಹೊಂದಿರುವ ಇಷ್ಟೊಂದು ಜನ ಉತ್ಸಾಹದಿಂದ ಇದ್ದಾರೆ. ಬೆಳ್ಳಂಬೆಳಗ್ಗೆ ಇಷ್ಟೊಂದು ಜನ ಬಂದಿರೋದು ಸಂತೋಷ ತಂದಿದೆ. ನನಗೂ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಯಾವಾಗ ಭಾರತಕ್ಕೆ ಬರ್ತೀನೋ ಅಂದುಕೊಳ್ಳುತ್ತಿದ್ದ. ಕೂಡಲೇ ಬೆಂಗಳೂರಿಗೆ ಹೊರಟು ಬಂದೆ. ಇಲ್ಲಿ ಮಕ್ಕಳೂ ಸಹ ಬಂದಿದಾರೆ, ಅವರೇ ನಮ್ಮ ಭವಿಷ್ಯ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಬೆಳಿಗ್ಗೆಯೇ ಬೆಂಗಳೂರಿಗೆ ಆಗಮಿಸುವುದರಿಂದ ರಾಜ್ಯಪಾಲರು, ಸಿಎಂ, ಡಿಸಿಎಂ ಅವರಿಗೆ ನಾನೇ ಭೇಟಿ ಮಾಡೊದು ಬೇಡ ಎಂದು ಹೇಳಿದ್ದೆ. ನಾನು ಬೇಗ ಬಂದು ಹೋಗ್ತೀನಿ, ಅಷ್ಟು ಬೇಗ ಯಾಕೆ ಬರ್ತಿರಾ ಎಂದು ನಾನೇ ಹೇಳಿದೆ. ನಮ್ಮ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿ ಹೋಗ್ತೀನಿ. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಸಿಎಂ, ಡಿಸಿಎಂ ಭೇಟಿ ಮಾಡ್ತೀನಿ ಎಂದಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇಸ್ರೋಗೆ ಹೊರಡುವ ಮುನ್ನ ಎಚ್ಎಎಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಿಂತಿದ್ದ ಜನರತ್ತ ಪ್ರಧಾನಿ ಮೋದಿ ಕೈ ಬೀಸಿದರು.