ಸ್ವಾವಲಂಬನೆಯ ಪಾಠ ಕಲಿಸಿದ ಕರೊನಾ ಬಿಕ್ಕಟ್ಟು: ಪಂಚಾಯತ್ ರಾಜ್ ದಿನದ ಪ್ರಯುಕ್ತ ಗ್ರಾ.ಪಂ. ಮುಖ್ಯಸ್ಥರನ್ನು ಉದ್ದೇಶಿಸಿ ಮೋದಿ ಭಾಷಣ

PM Modi File Pic 14 APR 20
Published on

ನವದೆಹಲಿ: ಕರೊನಾ ಸೋಂಕಿನ ಬಿಕ್ಕಟ್ಟು ದೇಶಕ್ಕೆ ಸ್ವಾವಲಂಬನೆಯ ದೊಡ್ಡ ಪಾಠ ಕಲಿಸಿದೆ. ನಿತ್ಯದ ಅವಶ್ಯಕತೆಗಳಿಗೆ ಯಾರ ಮೇಲೆ ಅವಲಂಬಿತರಾಗಬೇಡಿ ಎಂದು ತಿಳಿಸಿಕೊಟ್ಟಿದೆ ಎಂದು ಪ್ರಧಾನಿ ನೇಂದ್ರ ಮೋದಿ ಹೇಳಿದರು. ಪಂಚಾಯತ್ ರಾಜ್ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಮುಖ್ಯಸ್ಥರನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅವರು ಶುಕ್ರವಾರ ಭಾಷಣ ಮಾಡಿದರು. ರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟನ್ನು ನಗರ ಪ್ರದೇಶಗಳಿಗಿಂತ ಗ್ರಾಮ ಭಾರತ ಹೆಚ್ಚು ಆಸ್ಥೆಯಿಂದ ನಿರ್ವಹಿಸಿದೆ ಎಂದು ಅಭಿನಂದಿಸಿದರು.

‘ನಿಮ್ಮಿಂದ (ಗ್ರಾಮೀಣರು) ಕಲಿಯುವುದು ಬಹಳ ಇದೆ. ನಗರ ಪ್ರದೇಶದಲ್ಲಿನ ಹೆಚ್ಚು ಕಲಿತವರಿಗಿಂತ ನಿಮ್ಮಲ್ಲಿ ಸಾಮಾಜಿಕ ಅಂತರ ಶಿಸ್ತಿನಿಂದ ಪಾಲನೆಯಾಗಿದೆ. ಎರಡು ಗಜ ದೂರವನ್ನು (ಆರು ಅಡಿ ಅಂತರ) ಕಟ್ಟುನಿಟ್ಟಾಗಿ ಪಾಲಿಸಿದ್ದೀರಿ. ಬಿಕ್ಕಟ್ಟಿನ ದಿನಗಳಲ್ಲಿ ನವೀನ ಪರಿಕಲ್ಪನೆಗಳು ಗ್ರಾಮೀಣ ಭಾಗದಿಂದಲೇ ಹೆಚ್ಚು ವ್ಯಕ್ತವಾಗಿದೆೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇ-ಗ್ರಾಮ ಸ್ವರಾಜ್​ಗೆ ಚಾಲನೆ: ಅಂತರ್ಜಾಲ, ಮೊಬೈಲ್ ಫೋನ್​ಗಳು ದೇಶದ ಮೂಲೆ ಮೂಲೆಗೂ ಸಂವಹನ ಕಲ್ಪಿಸಿದೆ ಎಂದ ಪ್ರಧಾನಿ ಮೋದಿ, ಇ-ಗ್ರಾಮ ಸ್ವರಾಜ್ ವೆಬ್​ಸೈಟ್​ಗೆ ಚಾಲನೆ ನೀಡಿದರು. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಚಟುವಟಿಕೆ ಪುನರ್ ಆರಂಭಿಸಲಾಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರಸ್ತೆ ನಿರ್ವಣ, ಇನ್ನಿತರ ಮೂಲಸೌಕರ್ಯ ಯೋಜನೆಗಳನ್ನು ಮರು ಆರಂಭಿಸಬಹುದಾಗಿದೆ. ನಗರ ಪ್ರದೇಶಗಳಲ್ಲಿ ಬ್ರೆಡ್ ತಯಾರಿಕೆ, ಹಾಲಿನ ಉತ್ಪನ್ನ, ಧಾನ್ಯ ಗಿರಣಿ ಮೇಲಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ ಎಂದರು.

ಮಾಸ್ಕ್: ಕಳೆದ ವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ವೇಳೆ ಧರಿಸಿದಂತೆಯೇ ಅರಳೆ ಅಂಗವಸ್ತ್ರವನ್ನು (ಸ್ಕಾರ್ಫ್) ಬಾಯಿ, ಮೂಗಿಗೆ ಪ್ರಧಾನಿ ಮೋದಿ ಸುತ್ತಿದ್ದರು. ಆದರೆ, ಈ ಸಾರಿ ಅದರ ಬಣ್ಣ ಬೇರೆಯಾಗಿತ್ತು, ಗಾಢ ಹಳದಿ ಬಣ್ಣದ ಮೇಲೆ ಹಸಿರು ವೃತ್ತಾಕಾರ ಇರುವ ಅಂಗವಸ್ತ್ರ ಇದಾಗಿತ್ತು. ಗ್ರಾಮ ಪಂಚಾಯಿತಿ ಮುಖ್ಯಸ್ಥರೊಂದಿಗೆ ಸಂವಾದ ನಡೆಸುವಾಗ ಕೆಲವು ಕಾಲ ಇದನ್ನು ತೆಗೆದಿದ್ದರು. ಏ. 14ರಂದು ಲಾಕ್​ಡೌನ್ ವಿಸ್ತರಣೆ ಘೋಷಣೆ ಮಾಡಿದ ದಿನ ಬಿಳಿ, ಕಪ್ಪು  ಮತ್ತು ಕೆಂಪು ಬಣ್ಣ ಮಿಶ್ರಿತ ಅಂಗವಸ್ತ್ರವನ್ನು ಧರಿಸಿದ್ದರು. ಮತ್ತು ತಮ್ಮ ಟ್ವಿಟ್ಟರ್ ಪ್ರೊಫೈಲ್​ನ ಚಿತ್ರಕ್ಕೂ ಇದೇ ಚಿತ್ರವನ್ನು ಹಾಕಿದ್ದರು.

ಗ್ರಾಪಂ ಅಧ್ಯಕ್ಷರಿಗೆ ಮೆಚ್ಚುಗೆ ಸೂಚಿಸಿದ ಪ್ರಧಾನ ಮಂತ್ರಿ

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ತಾಲೂಕಿನ ವಾಟದಹೊಸಹಳ್ಳಿ ಗ್ರಾಪಂ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಪ್ರಯುಕ್ತ ಶುಕ್ರವಾರ ವಿಡಿಯೋ ಸಂವಾದದಲ್ಲಿ ಕರೊನಾ ನಿಯಂತ್ರಣಕ್ಕೆ ಗ್ರಾಪಂ ಕೈಗೊಂಡ ಕ್ರಮಗಳು, ಲಾಕ್​ಡೌನ್ ಸಂದರ್ಭ ಜನರಿಗೆ ಮೂಲಸೌಕರ್ಯ ಕಲ್ಪಿಸುವಿಕೆ, ನರೇಗಾ, ಸ್ವಚ್ಛ ಭಾರತ್ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಕಿಸಾನ್ ಸಮ್ಮಾನ್, ಪಿಂಚಣಿ ಸೇರಿ ಹಲವು ವಿಚಾರಗಳ ಮಾಹಿತಿ ಪಡೆದರು. ಗ್ರಾಪಂ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಕೇಳಿದ ಪ್ರಧಾನಿ 8500 ಮಂದಿ ಎಂದಿದ್ದಕ್ಕೆ, ‘ಓಹೋ, ದೊಡ್ಡ ಗ್ರಾಪಂ ಆಗಿದೆ. ನೀವು ಎಷ್ಟು ವರ್ಷದಿಂದ ಅಧ್ಯಕ್ಷರಾಗಿದ್ದೀರಿ? ಜನ ನಿಮ್ಮ ಮಾತು ಕೇಳ್ತಾರಾ?’ ಎಂದು ಪ್ರಶ್ನಿಸಿದರು. ಮೊದಲ ಬಾರಿಗೆ ಅಧ್ಯಕ್ಷರಾಗಿರುವ ನವೀನ್ ಕುಮಾರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರೊನಾ ಸೋಂಕು ಅನೇಕ ಸವಾಲುಗಳನ್ನು ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಹೇಗೆ ಬದುಕಬೇಕು, ನಮ್ಮ ಕ್ರಿಯೆಗಳು ಹೇಗಿರಬೇಕು ಎಂಬ ನೈಜ ಪಾಠವನ್ನು ಕಲಿಸಿಕೊಟ್ಟಿದೆ. ಸೋಂಕಿನಿಂದ ತಪ್ಪಿಸಿಕೊಳ್ಳಬೇಕಾದರೆ ಸ್ವಾವಲಂಬನೆಯೇ ಮಾರ್ಗ ಎಂಬುದನ್ನು ಕಲಿಸಿದೆ.

| ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net