

ಸಾಗರ: ಅಕ್ಷರಸ್ಥರಾದ ನಾವುಗಳೇ ಹೆಚ್ಚು ತಿಳಿದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಆದರೆ ಕನ್ನಡ ಸಾಹಿತ್ಯಕ್ಕೆ ಮೌಖಿಕ ಪರಂಪರೆ ಮೂಲಕ ನಮ್ಮ ಜನಪದರು ಕೊಟ್ಟ ಕೊಡುಗೆ ಬಹುದೊಡ್ಡದು ಮತ್ತು ಅಷ್ಟೇ ಶ್ರೀಮಂತವಾದುದು. ಹಾಗಾಗಿ ಜನಪದ ಮತ್ತು ಅದರ ಸೂಕ್ಷ್ಮತೆಯ ಅರಿವು ಮತ್ತು ಅಧ್ಯಯನ ಹೆಚ್ಚಾಗಬೇಕು ಎಂದು ಜನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗಾವಾರ ಹೇಳಿದರು.
ಸಾಗರ ತಾಲೂಕಿನ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್, ಚನ್ನಮ್ಮಾಜಿ ಜಾನಪದ ಕಲಾಸಂಘ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 6ನೇ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಕಲೆ, ಸಾಹಿತ್ಯ, ಸಾಮಾಜಿಕ ಚಳವಳಿಗಳಲ್ಲೂ ಸದಾ ಮುಂಚೂಣಿಯಲ್ಲಿದ್ದು ಕೆಲಸ ಮಾಡುವುದಲ್ಲದೆ ಎಷ್ಟೋ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ ಉದಾಹರಣೆಗಳೂ ಇವೆ ಎಂದರು.
ಜನಪದ ಸಮ್ಮೇಳನಗಳು ಸಾಮೂಹಿಕ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ. ಅಕ್ಷರ ಕಲಿಯದೆ ಇರುವವರೂ ಜ್ಞಾನಿಗಳಾಗಿದ್ದಾರೆ. ಜನಪದೀಯರು ಮೌಖಿಕ ಸಾಹಿತ್ಯದ ಮೂಲಕವೇ ಒಂದು ಪರಂಪರೆ ಸೃಷ್ಟಿಸಿದರು. ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಕ್ಷರಸ್ಥರನ್ನೂ ಬೆರಗುಗೊಳಿಸುತ್ತದೆ. ನಾಗರಿಕತೆ ಪ್ರವೇಶವಾಗುತ್ತಿದ್ದಂತೆ ಜನಪದ ಗೌಣವಾಗುತ್ತಿದೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಜಾನಪದದ ಎಚ್ಚರಿಸುವಿಕೆ ಮಲೆನಾಡಿನಲ್ಲಿ ಪ್ರದರ್ಶನಗಳು, ಅಧ್ಯಯನದ ಮೂಲಕ ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಸಮಾಜವಾದಿ ಚಳವಳಿಯನ್ನು ಸಮರ್ಥವಾಗಿ ಕಟ್ಟಿದ ನಾಡು ಶಿವಮೊಗ್ಗ ಜಿಲ್ಲೆ. ಕಾಗೋಡು ತಿಮ್ಮಪ್ಪ ಅವರಂತಹ ವ್ಯಕ್ತಿತ್ವವನ್ನು ನಾವು ಕಂಡಿದ್ದೇವೆ. ಶಾಂತವೇರಿ ಗೋಪಾಲ ಗೌಡ, ಡಾ. ರಾಮಮನೋಹರ ಲೋಹಿಯ ಮತ್ತಿತರ ನಾಯಕರು ಅವರನ್ನು ಮೆಚ್ಚಿಕೊಂಡಿದ್ದರು. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಕ್ಷರಶಃ ಪ್ರತಿಪಾದಿಸಿಕೊಂಡು ಬಂದ ಜಿಲ್ಲೆಯ ಅನೇಕ ಸಮಾಜವಾದಿ ಮುಖಂಡರು ರಾಜ್ಯದ ಚಳವಳಿಯ ಕಾಲಘಟ್ಟಗಳಲ್ಲಿ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪುರವರು ವಿಶ್ವಮಾನವ ಸಂದೇಶ ಮತ್ತು ಸಮಸಮಾಜವನ್ನು ಹೇಗೆ ಸಾರಿದರೋ ಹಾಗೆಯೇ ಜನಪದದ ವೈಶಿಷ್ಟೃ ಮತ್ತು ಅದರ ಬಹುಮುಖಿ ವಿಚಾರಧಾರೆಗಳನ್ನು ಎಚ್.ಎಲ್.ನಾಗೇಗೌಡ ಅವರು ವಿಶ್ವದ ಗಮನ ಸೆಳೆದಿದ್ದಾರೆ. ಹಾಗೆಯೇ ಸಮ್ಮೇಳನಗಳು ಹೊಸ ಮತ್ತು ಹಳೇ ತಲೆಮಾರಿನ ಕೊಂಡಿಯಾಗಿ ರೂಪುಗೊಂಡಿದೆ ಎಂದರು.
ಕಲಾವಿದನೂ ಮುಖ್ಯವಾಗಲಿ: ನನ್ನ ಜೀವನವನ್ನು ಮುನ್ನಡೆಸಿದ, ನನ್ನೂರಿನಲ್ಲಿಯೇ ಜಾನಪದ ಸಮ್ಮೇಳನದ ಅಧ್ಯಕ್ಷನಾಗಿರುವುದು ಬದುಕಿನ ಸಾರ್ಥಕ ಕ್ಷಣ ಎಂದುಕೊಂಡಿದ್ದೇನೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಬಿ.ಟಾಕಪ್ಪ ಅಭಿಪ್ರಾಯಪಟ್ಟರು. ಈ ಹಿಂದೆ ಸರ್ಕಾರ ನನಗೆ ಜನಪದ ಅಕಾಡೆಮಿ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸುವ ಅವಕಾಶ ನೀಡಿತ್ತು. ಕಲೆ ಉಳಿಯಬೇಕೆಂದರೆ ಕಲಾವಿದನೂ ಕೂಡ ಮುಖ್ಯನಾಗುತ್ತಾನೆ. ಕಾಲಕಾಲಕ್ಕೆ ಕಲೆ ತನ್ನ ರೂಪವನ್ನು ಬದಲಿಸುತ್ತಿದೆ. ನಾವು ಅದರ ಮೂಲವನ್ನು ಉಳಿಸಿಕೊಂಡು ಜನಪದ ಕಲೆಯನ್ನು ಕಾಪಾಡುವ ಕೆಲಸ ಮಾಡಬೇಕು ಎಂದರು.
ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ, ಚನ್ನಮ್ಮಾಜಿ ಜಾನಪದ ಕಲಾ ಸಂಘದ ಅಧ್ಯಕ್ಷ ಹುರಳಿ ಜಯಪ್ಪ, ಸಮ್ಮೇಳನ ನಿಕಟಪೂರ್ವ ಅಧ್ಯಕ್ಷ ಬೇಗೂರು ಶಿವಪ್ಪ, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಅಕ್ಷಯ ಸೌಹಾರ್ದ ಸಂಸ್ಥೆಯ ದಿನೇಶ್ ಬರದವಳ್ಳಿ, ಮಧುಸೂದನ್ ಐತಾಳ್, ವಿ.ಟಿ.ಸ್ವಾಮಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಸತ್ಯನಾರಾಯಣ್, ಜ್ಯೋತಿ ಕೋವಿ, ಗುಡುವಿ ಸ್ವಾಮಿರಾವ್, ಹೊಸೂರು ಗ್ರಾಪಂ ಅಧ್ಯಕ್ಷೆ ರೇವತಿ ಪ್ರಶಾಂತ್ ಇತರರಿದ್ದರು.