ಒಂದರ ಬದಲು ಎರಡು ಕಂಬ ಕಿತ್ತ ಗುತ್ತಿಗೆದಾರ

mescom (1)
ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ತೋಟದಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ತಂತಿ ಅಳವಡಿಸಿರುವುದು.
Published on

ರಿಪ್ಪನ್‌ಪೇಟೆ: ಚಿಕ್ಕಜೇನಿ ಗ್ರಾಮದ ಕಡಿತಗೊಂಡ ವಿದ್ಯುತ್ ಮಾರ್ಗ ದುರಸ್ತಿ ಕಾರ್ಯದಲ್ಲಿ ಮೆಸ್ಕಾಂ ಗುತ್ತಿಗೆದಾರನೊಬ್ಬ ಸರ್ಕಾರಿ ಸ್ವತ್ತುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಶಿಕುಮಾರ್ ಆರೋಪಿಸಿದರು.

ಚಿಕ್ಕಜೇನಿ ಗ್ರಾಮದ ಸರ್ವೇ ನಂ. 31ರ ಅಡಕೆ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗದ ಮೇಲೆ ಮರವೊಂದು ಉರುಳಿಬಿದ್ದು ಒಂದು ವಿದ್ಯುತ್ ಕಂಬ ಮುರಿದಿತ್ತು. ದುರಸ್ತಿ ಮಾಡಿಸುವಂತೆ ಮೆಸ್ಕಾಂ ಕಚೇರಿಗೆ ಮನವಿ ಮಾಡಿದ್ದರಿಂದ ಕಂಬ ಬದಲಾವಣೆಗಾಗಿ ಬಂದ ಗುತ್ತಿಗೆದಾರನ ಕೆಲಸಗಾರರು ಒಂದರ ಬದಲಿಗೆ ಎರಡು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ವಸ್ತುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಅನಗತ್ಯವಾಗಿ ಒಂದರ ಬದಲಿಗೆ ಎರಡು ಕಂಬಗಳನ್ನು ತೆರವುಗೊಳಿಸಿರುವ ಬಗ್ಗೆ ಇಲಾಖೆ ಮತ್ತು ಗುತ್ತಿಗೆದಾರನನ್ನು ಪ್ರಶ್ನಿಸಿದರೆ ಸೂಕ್ತ ಉತ್ತರ ನೀಡಿಲ್ಲ. ಮುರಿದ ಕಂಬ ರೈತನಿಗೆ ನೀಡಲು, ತಂತಿಗೆ ವಿದ್ಯುತ್ ಅವಘಡದ ರಕ್ಷಣೆಗಾಗಿ ರೈತನೇ ಡ್ರಿಪ್‌ಪೈಪ್ ಅಳವಡಿಸಿಕೊಳ್ಳಲು ಗುತ್ತಿಗೆದಾರ ಹಣದ ಬೇಡಿಕೆ ಇರಿಸಿದ್ದಾನೆ. ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿ, ಸರಿಯಿರುವ ಹಳೆಯ ಕಂಬ ತೆರವುಗೊಳಿಸಿ ವಾಹನದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಗ್ರಾಮಸ್ಥರು ವಿಲಗೊಳಿಸಿದಾಗ ಸರಿಯಿರುವ ಕಂಬವನ್ನು ಮುರಿಯುವಂತೆ ಸೂಚನೆ ನೀಡಿದ ಗುತ್ತಿಗೆದಾರ ರೈತರ ಮೇಲೆ ದರ್ಪ ತೋರಿದ್ದಾನೆ. ಸರಿಯಿರುವ ಕಂಬ ತೆರವುಗೊಳಿಸಿ ಮತ್ತೊಂದು ಕಂಬವನ್ನು ನೆಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ ಎಂದು ದೂರಿದ್ದಾರೆ.

ಪ್ರಜ್ಞಾವಂತರಾದ ನಾವುಗಳೇ ಗುತ್ತಿಗೆದಾರನನ್ನು ಪ್ರಶ್ನಿಸದಿದ್ದರೆ ಸಮಾಜಕ್ಕೆ ಲೋಪ ಎಸಗಿದಂತಾಗುತ್ತದೆ. ಘಟನೆಗೆ ಸಂಬಂಧಿಸಿದ ದಾಖಲಾತಿಗಳು ನನ್ನಲ್ಲಿವೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಕ್ಕಾಗಿ ಲೋಕಾಯುಕ್ತರ ಮೊರೆ ಹೋಗುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net