ವೈದ್ಯಕೀಯ ಶಿಕ್ಷಣದ ಸವಾಲು: ಭಾರತದಲ್ಲಿ ಮೂಲಸೌಕರ್ಯಗಳು ವಿಸ್ತರಣೆಯಾಗಬೇಕು

sdfsda
Published on

ಯುದ್ಧಪೀಡಿತ ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯೂಕ್ರೇನ್​ನಂಥ ಪುಟ್ಟಪುಟ್ಟ ರಾಷ್ಟ್ರಗಳಿಗೆ ತೆರಳುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟದಲ್ಲಿ ಇಲ್ಲಿನ ವೈದ್ಯಕೀಯ ಶಿಕ್ಷಣದ ಕೊರತೆಗಳು ಢಾಳಾಗಿ ಕಂಡುಬಂದಿವೆ.

ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ಯುವಜನರು ವೈದ್ಯಕೀಯ ಶಿಕ್ಷಣಕ್ಕಾಗಿ ಸಣ್ಣಸಣ್ಣ ದೇಶಗಳಿಗೆ ಹೋಗುವ ಬದಲು ಸ್ವದೇಶದಲ್ಲಿ ವ್ಯಾಸಂಗ ಮಾಡುವುದು ಒಳಿತು. ಈ ನಿಟ್ಟಿನಲ್ಲಿ ಖಾಸಗಿ ವಲಯದವರೂ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಬೇಕು ಮತ್ತು ರಾಜ್ಯ ಸರ್ಕಾರಗಳು ಕೂಡ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಹೀಗಾದಾಗ ಭಾರತದಿಂದಲೇ ಹೆಚ್ಚು ವೈದ್ಯಕೀಯ ಪದವೀಧರರು ಹೊರಹೊಮ್ಮುತ್ತಾರೆ’ ಎಂದಿದ್ದಾರೆ. ಮೂಲಸೌಕರ್ಯಗಳ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು ಅಗತ್ಯವೇ; ಆದರೆ ಕೊರತೆಗಳನ್ನು ನಿವಾರಿಸಿ, ವೈದ್ಯಕೀಯ ಶಿಕ್ಷಣ ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡುವುದು ಅತಿಮುಖ್ಯ.

ಸರ್ಕಾರಿ ಹಾಗೂ ಖಾಸಗಿ ಸೇರಿ ದೇಶದಲ್ಲಿ ಎಂಬಿಬಿಎಸ್ ಶಿಕ್ಷಣ ನೀಡಲು 595 ಸಂಸ್ಥೆಗಳಿದ್ದು, ಅಂದಾಜು 83 ಸಾವಿರ ಸೀಟುಗಳಿವೆ. ಕರ್ನಾಟಕದಲ್ಲಿ 19 ಸರ್ಕಾರಿ, 30 ಖಾಸಗಿ ಮತ್ತು 12 ಡೀಮ್್ಡ ವಿವಿಗಳಿವೆ. ಇವುಗಳಲ್ಲಿ 2,900 ಸರ್ಕಾರಿ, 6,595 ಖಾಸಗಿ ಸೇರಿ ಒಟ್ಟು 9,345 ಎಂಬಿಬಿಎಸ್ ಸೀಟುಗಳಿವೆ. ದೇಶದಲ್ಲಿ ಲಭ್ಯವಿರುವ ಅಂದಾಜು 83 ಸಾವಿರ ಸೀಟುಗಳಿಗೆ 15-16 ಲಕ್ಷ ಆಕಾಂಕ್ಷಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ! ಅದೇ ರೀತಿ ಕರ್ನಾಟಕದ 9,345 ಸೀಟುಗಳಿಗೆ ದಾಖಲಾಗಲು 1 ಲಕ್ಷಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿರುತ್ತಾರೆ. ಇಷ್ಟು ಸ್ಪರ್ಧಾತ್ಮಕತೆಯಲ್ಲಿ ಉನ್ನತ ರ‍್ಯಾಂಕಿಂಗ್ ಪಡೆದವರಿಗೆ ಮಾತ್ರವೇ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗುತ್ತವೆ. ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್​ವೆುಂಟ್ ಕೋಟಾದಡಿ ಪ್ರವೇಶ ಪಡೆದು, ಎಂಬಿಬಿಎಸ್ ಮುಗಿಸಲು 50-60 ಲಕ್ಷ ರೂ., ಕೆಲವೊಮ್ಮೆ ಇದಕ್ಕಿಂತಲೂ ಅಧಿಕ ಮೊತ್ತ ಖರ್ಚಾಗುತ್ತದೆ.

ಮಧ್ಯಮವರ್ಗದವರಿಗೆ ಇಷ್ಟು ಖರ್ಚು ಮಾಡಿ, ವ್ಯಾಸಂಗ ಕೈಗೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಕಡಿಮೆ ಶುಲ್ಕ ಇರುವ ಸಣ್ಣ ರಾಷ್ಟ್ರಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಆದರೆ, ಯೂಕ್ರೇನ್​ನಂಥ ಭಯಾನಕ ಬಿಕ್ಕಟ್ಟು ಎದುರಾದಾಗ ಅಥವಾ ಇತರ ಆಪತ್ತುಗಳು ಸಂಭವಿಸಿದಾಗ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗುತ್ತದೆ. ಕೆಲ ದೇಶಗಳಲ್ಲಿ ಎಂಬಿಬಿಎಸ್ ಪೂರೈಸಿದರೂ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಪ್ರತ್ಯೇಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಕ್ಕೆ ಪರಿಹಾರವಾಗಿ, ಇಲ್ಲಿನ ವ್ಯವಸ್ಥೆಯಲ್ಲಿಯೇ ಆಮೂಲಾಗ್ರ ಸುಧಾರಣೆಯಾಗಬೇಕು. ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಕೈಗೆಟಕುವಂತಾಗಬೇಕು. ರಾಜ್ಯ ಸರ್ಕಾರಗಳು ಈ ಬಗ್ಗೆ ಸ್ವಲ್ಪ ಕಾಳಜಿ ತೋರಿದ್ದಲ್ಲಿ ಮಹತ್ವದ ಪರಿವರ್ತನೆ ತರುವುದು ಅಸಾಧ್ಯವೇನಲ್ಲ. ಹಾಗೆಯೇ, ವಿದ್ಯಾರ್ಥಿಗಳು ಕೂಡ ಭಾರತದಲ್ಲೇ ವ್ಯಾಸಂಗ ಕೈಗೊಳ್ಳಲು ಮನಸ್ಸು ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net