ಲಂಚ ಪಡೆದ ಆರೋಪ ಎಸ್.ಎಂ.ಮಣ್ಣನ್ ವಿರುದ್ಧ ಪ್ರಕರಣ ರದ್ದು

highcourt
Published on

ಬೆಂಗಳೂರು : ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್.ಎಂ.ಮಣ್ಣನ್ ವಿರುದ್ಧ ಸಿಬಿಐ ಹೂಡಿದ್ದ ಲಂಚದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ತಮ್ಮ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಮಣ್ಣನ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಸಿಬಿಐ ಎನ್ವಲಪ್ ಕವರ್(ಲಕೋಟೆ) ಬಣ್ಣ ಮತ್ತು ಅದರಲ್ಲಿದ್ದ ನಗದು ಆಧರಿಸಿ ಕೇಸ್ ಹೂಡಿದೆ, ಆದರೆ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರಕರಣ ರದ್ದುಗೊಳಿಸಿ ಅರ್ಜಿದಾರರನ್ನು ಖುಲಾಸೆಗೊಳಿಸಿದೆ.

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ‘‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲಂಚದ ಆರೋಪ ಹೊರಿಸಲಾಗಿದೆ, ಆದರೆ ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಕುರಿತಾಗಿ ಯಾವುದೇ ಸೂಕ್ತ ಸಾಕ್ಷಾೃಧಾರಗಳಿಲ್ಲಹಾಗಾಗಿ ಪ್ರಕರಣ ಊರ್ಜಿತವಾಗುವುದಿಲ್ಲ’ ಎಂದು ಹೇಳಿದೆ.

ಅಲ್ಲದೆ, ‘‘ಸಿಬಿಐ ಅಧಿಕಾರಿಗಳು ಅವರನ್ನು ಟ್ರ್ಯಾಪ್ ಮಾಡಿಲ್ಲ, ಶೋಧ ಕಾರ್ಯವನ್ನು ಕಾನೂನು ಬದ್ಧವಾಗಿ ನಡೆಸಿಲ್ಲ, ಅರ್ಜಿದಾರರ ಫೋನ್ ಟ್ರ್ಯಾಪ್ ಮಾಡಲು ಕಾನೂನು ರೀತಿಯಲ್ಲಿ ಅನುಮತಿ ಪಡೆದಿಲ್ಲ, ಇದೆಲ್ಲ ಅಂಶವೂ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿವೆ.

ಇದೆಲ್ಲ ಅಂಶವನ್ನು ಗಮನಿಸಿದರೆ ಸಿಬಿಐ ಲಕೋಟೆಯಲ್ಲಿ ಹಣವಿತ್ತು ಎಂಬ ಕಾರಣಕ್ಕೆ ಅರ್ಜಿದಾರರಿಗೆ ಕಳಂಕತರಲು ಪ್ರಯತ್ನ ನಡೆದಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ.

ನನಗೆ ನೀಡುತ್ತಿರುವ ಕಿರುಕುಳ

ತಾನು ಹಿರಿಯ ಅಧಿಕಾರಿಗಳ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ತನ್ನ ವಿರುದ್ಧ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಇದು ಗ್ಲಾಡೈಸ್ ಜಯಂತಿ ಅವರು ನನಗೆ ನೀಡುತ್ತಿರುವ ಕಿರುಕುಳವಾಗಿದೆ. ಮೊಬೈಲ್ ಟ್ರ್ಯಾಪ್ ಮಾಡಿದ್ದು ಅಕ್ರಮ. ತಾವು ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಸ್ವೀಕರಿಸಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ.ಆದರೆ ಸಿಬಿಐ ಎನ್‌ವಲಪ್ ನಲ್ಲಿ ಹಣವಿತ್ತು ಎಂದು ಹೇಳುತ್ತಿದೆ. ಆದರೆ ಅದಕ್ಕೆ ಆಧಾರವಿಲ್ಲ ಎಂದು ಎಸ್.ಎಂ.ಮಣ್ಣನ್ ನ್ಯಾಯಾಲಯದ ಮೊರೆ ಹೋಗಿದ್ದರು.

ಏನಿದು ಪ್ರಕರಣ ?

ರಾಮನಗರ ಜಿಲ್ಲೆಯಲ್ಲಿ ಎಲ್‌ಪಿಜಿ ದಾಸ್ತಾನು ಘಟಕದ ಲೈಸನ್ಸ್ ರದ್ದತಿ ಆದೇಶವನ್ನು ಜಾರಿಗೊಳಿಸುವಂತೆ ಸಿಬಿಐನ ಡೆಪ್ಯೂಟಿ ಸೂಪರಿಂಟೆಂಡೆಟ್ (ಭ್ರಷ್ಟಾಚಾರ ನಿಗ್ರಹ ದಳ) ಗ್ಲಾಡೈಸ್ ಜಯಂತಿ, ಮಣ್ಣನ್ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಮಣ್ಣನ್, ಆ ನಿರ್ದೇಶನವನ್ನು ಪಾಲಿಸಲಾಗದು, ಏಕೆಂದರೆ ಅವರು ಅಕ್ರಮವಾಗಿ ಲೈಸನ್ಸ್ ರದ್ದತಿ ಕೋರಿದ್ದಾರೆ ಎಂದು ವಿವರಿಸಿದ್ದರು. ಆದರೆ ಸಿಬಿಐ ಅಧಿಕಾರಿ ಸಾಂಘವಿ ಸಿಲಿಂಡರ್ ಪ್ರವೈಟ್ ಲಿಮಿಟೆಡ್ ಗೆ ಮತ್ತಿಬ್ಬರ ಜತೆ ಭೇಟಿ ನೀಡುವಂತೆ ಸೂಚಿಸಿದ್ದರು. ಆದರೆ 2019ರ ಸೆ.22ರಂದು ಸಿಬಿಐ ಮಣ್ಣನ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ಮರು ದಿನ ಸೆ.23ರಂದು ಕೇಂದ್ರ ಗೃಹ ಸಚಿವಾಲಯ ಮಣ್ಣನ್ ಅವರ ಮೊಬೈಲ್ ಟ್ಯಾಪ್ ಮಾಡಲು ಆದೇಶ ನೀಡಿತ್ತು. ಅದರಲ್ಲಿ ಕುಮಾರ್ ಎಂಬುವರು ಮಣ್ಣನ್ ಎಂಬುವರಿಗೆ ಕರೆ ಮಾಡಿದ್ದರು, ಆಗ ಮಣ್ಣನ್ 50ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗತಿ ಹೊರಬಿತ್ತು.ಮರು ದಿನ ಮಣ್ಣನ್, ಕುಮಾರ್ ಎಂಬುವರು ಕಳುಹಿಸಿದ್ದ ರಿಷಬ್ ಬಿಪಿನ್ ದೇಸಾಯಿ ಅವರಿಂದ 50 ಸಾವಿರ ಲಂಚ ಪಡೆದರು ಎನ್ನಲಾಗಿದೆ. ಸಿಬಿಐ ಅಧಿಕಾರಿಗಳು ಮಣ್ಣನ್ ಮೇಲೆ ದಾಳಿ ನಡೆಸಿದಾಗ ಎನ್‌ವಲಪ್ ನಲ್ಲಿ 50ಸಾವಿರ ನಗದು ಇದ್ದುದು ಕಂಡು ಬಂದಿತು. ಹಾಗಾಗಿ ಸಿಬಿಐ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net