

ಆಯನೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯನೂರು ಬಳಿ ದೊಡ್ಡ ಸೇತುವೆ ಮೇಲಿಂದ ಹಳ್ಳಕ್ಕೆ ಮಂಗಳವಾರ ಬೆಳಗ್ಗೆ ಕಾರು ಉರುಳಿ ಬಿದ್ದಿದ್ದು, ಪ್ರಯಾಣಿಕರೆಲ್ಲರೂ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಚಿತ್ರದುರ್ಗದಿಂದ ಸಿಗಂದೂರು ದೇವಿ ದರ್ಶನಕ್ಕಾಗಿ ತೆರಳುತ್ತಿದ್ದರು. ಆಯನೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಮೇಲಿಂದ ಕಾರು ಬಿದ್ದಿದೆ.
ಮೇಲಿಂದ ಬಿದ್ದ ಕಾರು ಒಂದು ಪಲ್ಟಿ ಹೊಡೆದು ಮತ್ತೆ ನಿಂತುಕೊಂಡಿದೆ. ಕ್ರೈನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಯಿತು. ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದರು. ಬಿದ್ದ ರಭಸಕ್ಕೆ ಕಾರು ಜಖಂಗೊಂಡಿದ್ದರೂ ಯಾರಿಗೂ ಅಪಾಯವಾಗಿಲ್ಲ. ಚಾಲಕ ಪರಾರಿಯಾಗಿದ್ದಾನೆ.
ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಣಕ್ಕೆ ಬಾರದೆ ಕಾರು ಹಳ್ಳಕ್ಕೆ ಬಿದ್ದಿರಬಹುದು ಅಥವಾ ಅತಿ ವೇಗದಿಂದ ವಾಹನ ಚಲಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಯನೂರಿನ ಸ್ಥಳೀಯರು ಹಾಗೂ ವಾಹನ ಸವಾರರು ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲು ನೆರವಾದರು. ಸ್ಥಳಕ್ಕೆ ಕುಂಸಿ ಠಾಣೆ ಎಸ್‌ಐ ಹರೀಶ್ ಪಟೇಲ್ ಭೇಟಿ ನೀಡಿದ್ದರು.