

ಬೆಂಗಳೂರು: ಕೋವಿಡ್-19ರ ಸೋಂಕು ಬೆಕ್ಕುಗಳಿಂದ ಬರಲಿದೆ ಎಂಬ ವಿಚಾರಕ್ಕೆ ಅಕ್ಕಪಕ್ಕದ ಮನೆಯವರಿಗೆ ಜಗಳವಾಗಿದ್ದು, ಪ್ರಕರಣವೀಗ ಪುಲಿಕೇಶಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಫ್ರೇಜರ್ಟೌನ್ನ ಕೋಲಿಸ್ ರಸ್ತೆಯ ಫಾರೂಖ್ ಅಹ್ಮದ್ ಮತ್ತು ಸಂದೀಪ್ ಆಚಾರ್ಯ ಎಂಬುವರ ನಡುವೆ ಜಗಳವಾಗಿದೆ.
ಒಂದೇ ಅಪಾರ್ಟ್ವೆುಂಟ್ನಲ್ಲಿ ಈ ಇಬ್ಬರು ನೆಲೆಸಿದ್ದಾರೆ. ದಾರಿ ತಪ್ಪಿ ಬರುವ ಬೆಕ್ಕುಗಳಿಗೆ ಸಂದೀಪ್ ಆಚಾರ್ಯ ಹಾಲು, ಅನ್ನ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಲಾಕ್ಡೌನ್ ಸಮಯದಲ್ಲಿಯೂ ಆಹಾರ ಹಾಕುತ್ತಿದ್ದರು. ಇದನ್ನು ಗಮನಿಸಿದ ಅಪಾರ್ಟ್ವೆುಂಟ್ ನಿವಾಸಿಗಳು, ಬೆಕ್ಕಿನಿಂದಲೂ ಕರೊನಾ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಊಟ ಹಾಕದಂತೆ ಮನವಿ ಮಾಡಿದ್ದರು.
ಏ.23ರ ಸಂಜೆ 7.15ರಲ್ಲಿ ಸಂದೀಪ್ ಬೆಕ್ಕುಗಳಿಗೆ ಆಹಾರ ಹಾಕಿದ್ದರು. ಅದೇ ಸಮಯಕ್ಕೆ ವಾಯು ವಿಹಾರಕ್ಕೆ ಹೊರಬಂದ ಫಾರೂಖ್ ಪ್ರಶ್ನೆ ಮಾಡಿದ್ದರು. ಆಗ ಫಾರೂಖ್ ಮೇಲೆ ಸಂದೀಪ್ ಹಲ್ಲೆ ನಡೆಸಿದ್ದಾರೆ. ಫಾರೂಖ್ ನೀಡಿರುವ ದೂರಿನ ಸಂಬಂಧ ಕ್ರಮ ತೆಗೆದುಕೊಂಡಿರುವುದಾಗಿ ಪುಲಿಕೇಶಿನಗರ ಪೊಲೀಸರು ತಿಳಿಸಿದ್ದಾರೆ.