

ಬೆಂಗಳೂರು: ಧರ್ಮಸ್ಥಳ ವಿರುದ್ಧ ಷಡ್ಯಂತರ ನಡೆಸಲು ಬುರುಡೆ ಗ್ಯಾಂಗ್‌ನ ಸದಸ್ಯರು ಬೆಂಗಳೂರಿನ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಸಭೆ ಸೇರಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಎಸ್‌ಐಟಿ ಆರೋಪಿ ಚಿನ್ನಯ್ಯನನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದೆ.
ಭಾನುವಾರ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿ ಇರುವ ಗಿರೀಶ್ ಮಟ್ಟಣ್ಣನವರ್ ಮನೆಯ ಸಮೀಪದಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಚಿನ್ನಯ್ಯನ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದೆ.
ಎಸ್ಪಿ ವಿಕ್ಟರ್ ಸೈಮನ್ ನೇತೃತ್ವದಲ್ಲಿ ೨೦ ಅಧಿಕಾರಿ-ಸಿಬ್ಬಂದಿಯ ತಂಡ, ಸೊಕೊ ತಂಡ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಿಂಡ್ಲು ಸರ್ಕಲ್‌ನಲ್ಲಿರುವ ಎ.ಬಿ ಮ್ಯಾನ್ಷನ್ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಮುಂಜಾನೆ ೩ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೂ ಮಹಜರು ನಡೆಸಿದ್ದಾರೆ.
ಐದಾರು ತಿಂಗಳ ಹಿಂದೆಯೇ ಈ ಸರ್ವೀಸ್ ಅಪಾರ್ಟ್‌ಮೆಂಟ್ ಅನ್ನು ಒಂದು ವಾರಗಳಿಗೆ ಬಾಡಿಗೆಗೆ ಪಡೆದುಕೊಂಡಿದ್ದ ಬುರುಡೆ ಗ್ಯಾಂಗ್‌ನ ಸದಸ್ಯರಾದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ, ಸುಜಾತ ಭಟ್, ಮಹೇಶ್ ತಿಮರೋಡಿ ಮತ್ತು ಜಯಂತ್ ಹಾಗೂ ಇತರರು ಸಭೆ ನಡೆಸಿದ್ದರು.
ಈ ವೇಳೆ ಚಿನ್ನಯ್ಯ ಬ್ಯಾಗ್‌ನಲ್ಲಿ ಬುರುಡೆ ತೆಗೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.
ಮಹತ್ವದ ದಾಖಲೆಗಳು ಜಪ್ತಿ:
ಸರ್ವೀಸ್ ಅಪಾರ್ಟ್‌ಮೆಂಟ್‌ನ ಆಯ್ದ ಸ್ಥಳದಲ್ಲಿ ಶೋಧನ ನಡೆಸಿದ ಎಸ್‌ಐಟಿ ಅಧಿಕಾರಿಗಳು, ಯಾರ ಹೆಸರಲ್ಲಿ, ಯಾವಾಗ ರೂಂ ಬುಕ್ಕಿಂಗ್ ಆಗಿತ್ತು? ಎಷ್ಟು ಜನ ರೂಂಗೆ ಬರುತ್ತಿದ್ದರು? ಎಷ್ಟು ಬಾರಿ ಬುಕ್ ಆಗಿದೆ? ಎಂಬ ಬಗ್ಗೆ, ಅಪಾರ್ಟ್‌ಮೆಂಟ್‌ನ ಲೆಡ್ಜರ್ ಬುಕ್, ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮರಾ ಡಿವಿಆರ್ ಜಪ್ತಿ ಮಾಡಿಕೊಂಡು ಹೋಗಿದೆ. ಗ್ಯಾಂಗ್‌ನ ಸದಸ್ಯರು ಬಂದಾಗ ಇದ್ದ ಅಪಾರ್ಟ್‌ಮೆಂಟ್‌ನ ಕೆಲಸಗಾರರು ಹಾಗೂ ಸ್ವಾಗತಕಾರಿಣಿ ವಿಭಾಗದಲ್ಲಿದ್ದ ನೌಕರರ ಹೇಳಿಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಹರ್ಸಲ್ ನಡೆಸಿದ್ದ ಗ್ಯಾಂಗ್:
ಈ ಸರ್ವೀಸ್ ಅಪಾರ್ಟ್‌ಮೆಂಟ್ ಅನ್ನು ಗಿರೀಶ್ ಮಟ್ಟಣ್ಣನವರ್ ಹೆಸರಿನಲ್ಲಿ ಬುಕ್ಕಿಂಗ್ ಮಾಡಲಾಗಿದೆ ಎನ್ನಲಾಗಿದೆ. ಇಲ್ಲಿಯೇ ಸುದೀರ್ಘ ಸಭೆ ನಡಸಿದ್ದ ಬುರುಡೆ ಗ್ಯಾಂಗ್‌ನ ಮಾಸ್ಟರ್ ಮೈಂಡ್‌ಗಳು, ಚಿನ್ನಯ್ಯ ಮತ್ತು ಸುಜಾತಾ ಭಟ್‌ಗೆ ಯಾವ ರೀತಿ ಪೊಲೀಸರು ಮತ್ತು ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಬೇಕು ಎಂಬುದನ್ನು ಇಂಚಿಂಚೂ ಹೇಳಿಕೊಟ್ಟಿದ್ದರು. ಜತೆಗೆ ರಿಹರ್ಸಲ್ ಕೂಡ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ವಿರುದ್ಧವಾಗಿ ನಡೆದಿರುವ ಷಡ್ಯಂತ್ರ ಸಂಕೀರ್ಣ ಹಾಗೂ ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಎಸ್‌ಐಟಿ ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿದೆ. ಷಡ್ಯಂತ್ರದ ಪ್ರಮುಖ ಸೂತ್ರಧಾರರು ಎಂದು ಭಾವಿಸಲಾಗಿರುವ ವ್ಯಕ್ತಿಗಳ ಮನೆಗಳಲ್ಲೂ ಶೋಧ ನಡೆಸಿದ್ದು, ಮುಂದಿನ ಹಂತದಲ್ಲಿ ಆರೋಪಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ.
ಹೋರಾಟಗಾರ ಜಯಂತ್ ಟಿ. ಮನೆಯಲ್ಲಿ ಸತತ ೮ ಗಂಟೆಗಳ ಕಾಲ ನಿರಂತರವಾಗಿ ಶೋಧ ಹಾಗೂ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಸ್ಥಳ ಮಹಜರು ನಡೆಸಿ, ಪಂಚರ ಸಮುಖದಲ್ಲಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆೆ. ಇದೀಗ ಚಿನ್ನಯ್ಯನನ್ನು ಕರೆದುಕೊಂಡು ಎಸ್‌ಐಟಿ ಮಂಗಳೂರಿಗೆ ವಾಪಸ್ ಹೋಗಿದೆ.