

ಬಾಳೆಹೊನ್ನೂರು: ಎನ್.ಆರ್.ಪುರ ಮುಖ್ಯರಸ್ತೆಯ ವಾಟುಕೊಡಿಗೆ ಬಳಿ ಕಳೆದ ವರ್ಷ ನಿರ್ಮಿಸಿದ ನೂತನ ಸೇತುವೆಯ ತಳಭಾಗದಲ್ಲಿ ಮಣ್ಣು ಕುಸಿದಿದ್ದು ಇದರಿಂದ ಸೇತುವೆಗೆ ಹಾನಿಯಾಗಿ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ವಾಟುಕೊಡಿಗೆ ಮುಖ್ಯರಸ್ತೆಯ ಕಿರಿದಾಗಿದ್ದ ಸೇತುವೆಯನ್ನು ಕಳೆದ ವರ್ಷ ತೆಗೆದು 1 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿ ಕಳೆದ ಕೆಲ ತಿಂಗಳ ಹಿಂದೆ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದೀಗ ನೂತನ ಸೇತುವೆ ಕೆಳಭಾಗದಲ್ಲಿ ಹಾಕಿರುವ ಮಣ್ಣು ಒಂದು ಬದಿಯಿಂದ ಸ್ವಲ್ಪ ಪ್ರಮಾಣದಲ್ಲಿ ಕುಸಿದು ಗುಂಡಿ ಬಿದ್ದಿದ್ದು ಸೇತುವೆಗೆ ಹಾನಿಯಾಗುವ ಆತಂಕ ಎದುರಾಗಿದೆ.
ಮಳೆ ಆರಂಭವಾದಲ್ಲಿ ಅಥವಾ ಅಧಿಕ ಭಾರ ಹೊತ್ತ ವಾಹನಗಳು ಹೆಚ್ಚಾಗಿ ಸಂಚರಿಸಿದರೆ ಮಣ್ಣು ಕುಸಿದು ಸೇತುವೆಗೆ ತೀವ್ರ ಹಾನಿಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗುಂಡಿಬಿದ್ದ ಜಾಗದಲ್ಲಿ ದುರಸ್ತಿ ಮಾಡಿಸಿ ಹೊಸ ಸೇತುವೆಗೆ ಯಾವುದೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.