ಐ-ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆ ತೊರೆದಿದ್ದ ಬಾಲಕರು

iphone
Published on

ಬೆಂಗಳೂರು: ಪಾಲಕರು ಐ-ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಇಬ್ಬರು ಬಾಲಕರು ಮನೆಬಿಟ್ಟು ಹೋಗಿದ್ದ ಪ್ರಕರಣ ನಗರದಲ್ಲಿ ನಡೆದಿದೆ.
ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಸಂಜಯನಗರ ಠಾಣೆ ಪೊಲೀಸರು ಗೋವಾದಲ್ಲಿ ಪತ್ತೆಹಚ್ಚಿ ಪಾಲಕರಿಗೆ ಒಪ್ಪಿಸಿದ್ದಾರೆ. ನಾಗಶೆಟ್ಟಿಹಳ್ಳಿ ಮತ್ತು ಹೆಬ್ಬಾಳದ ಕೆಂಪಾಪುರ ಮೂಲದ ೧೫ ವರ್ಷದ ಇಬ್ಬರು ಬಾಲಕರು ಭೂಪಸಂದ್ರದ ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಸೆ.೧ರಂದು ಮದರಸಾದಿಂದ ಇಬ್ಬರೂ ಏಕಾಏಕಿ ನಾಪತ್ತೆಯಾಗಿದ್ದರು. ಈ ಸಂಬಂಧ ಪಾಲಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪಾಲಕರ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಗೇಜ್ ತೆಗೆದುಕೊಂಡು ಹೋಗಿದ್ದರು:
ನಾಗಶೆಟ್ಟಿಹಳ್ಳಿ ನಿವಾಸಿಯಾದ ಒಬ್ಬ ಬಾಲಕ ಪ್ರತಿ ದಿನ ಬೆಳಗ್ಗೆ ೬ ಗಂಟೆಗೆ ಮದರಸಾಗೆ ತೆರಳಿ ರಾತ್ರಿ ೧೦ ಗಂಟೆಗೆ ವಾಪಾಸ್ ಮನೆಗೆ ಬರುತ್ತಿದ್ದ. ಕೆಂಪಾಪುರದ ಮತ್ತೊಬ್ಬ ಬಾಲಕ ಮದರಸಾದಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದ. ಸೆ.೧ರಂದು ಮದರಸಾಗೆ ರಜೆ ಇತ್ತು. ಆದರೂ ಸಂಜೆ ೪.೩೦ರ ಸುಮಾರಿಗೆ ನಾಗಶೆಟ್ಟಿಹಳ್ಳಿಯಿಂದ ಬಾಲಕ ಮದರಸಾಗೆ ಬಂದಿದ್ದ. ಈ ವೇಳೆ ಇಬ್ಬರು ಮದರಸದಿಂದ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಬಾಲಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಮೊಬೈಲ್‌ಗೆ ಪಾಲಕರು ಕರೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಇದರಿಂದ ಗಾಬರಿಗೊಂಡ ಪಾಲಕರು ಮದರಸಾ ಬಳಿ ಬಂದು ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮದರಸಾದ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾಗ ಇಬ್ಬರು ಬಾಲಕರು ಲಗೇಜ್ ತೆಗೆದುಕೊಂಡು ಹೊರಗೆ ಹೋಗಿರುವುದು ಕಂಡು ಬಂದಿತ್ತು. ಈ ಸಂಬಂಧ ಪಾಲಕರು ನೀಡಿದ್ದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡುಇಬ್ಬರು ಬಾಲಕರನ್ನು ಪತ್ತೆಹಚ್ಚಿ ನಗರಕ್ಕೆ ತಂದು ಪಾಲಕರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net