

ಆನಂದಪುರ: ಬಸವನಹೊಂಡ ಗ್ರಾಮದ ಕಲ್ಕೆರೆಯಲ್ಲಿ ಬಾಲಕ ಸಮಯಪ್ರಜ್ಞೆ ಮೆರೆದು ಹುಲ್ಲಿನ ಪೆಂಡಿ ಕಟ್ಟುವ ಯಂತ್ರದ ಚಾಲಕನ ಜೀವ ಉಳಿಸಿದ್ದಾನೆ.
ಕಲ್ಕೆರೆ ಗ್ರಾಮದಲ್ಲಿ ಶಿಕಾರಿಪುರದ ಮದನ (28) ಹುಲ್ಲಿನ ಪೆಂಡಿ ಕಟ್ಟುವ ಯಂತ್ರದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಹುಲ್ಲನ್ನು ಯಂತ್ರದ ಕಡೆ ನೂಕುತ್ತಿದ್ದಾಗ ಚಾಲಕನ ಕೈ ಯಂತ್ರಕ್ಕೆ ಸಿಲುಕಿಕೊಂಡು ಜೋರಾಗಿ ಕೂಗಿಕೊಂಡಿದ್ದಾನೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ರಾಮಚಂದ್ರ ಅವರ ಮಗ, ಯಡೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಧು ತಕ್ಷಣ ಸಮಯಪ್ರಜ್ಞೆ ಮೆರೆದು ಟ್ರಾೃಕ್ಟರ್‌ನ ಇಂಜಿನ್ ಸ್ವಿಚ್ ಆಫ್ ಮಾಡಿದ್ದಾನೆ.
ಮದನನ ಕೈ ಅಷ್ಟರಲ್ಲಿ ಯಂತ್ರಕ್ಕೆ ಸಿಲುಕು ಅರ್ಧ ಭಾಗ ಸುಲಿದು ಹೋಗಿ ಮಾಂಸಖಂಡ ಹೊರಬಂದಿತ್ತು. ಇನ್ನೂ ಸ್ವಲ್ಪ ವಿಳಂಬವಾಗಿದ್ದರೆ ಮದನನ ಪೂರ್ತಿ ದೇಹವೇ ಯಂತ್ರಕ್ಕೆ ಸಿಲುಕಿ ಜೀವಕ್ಕೆ ಅಪಾಯ ಉಂಟಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಇಂಜಿನ್ ಸ್ವಿಚ್ ಆಫ್ ಮಾಡಿದ ಮಧು ಚಾಲಕನ ಜೀವ ಉಳಿಸಿದ್ದಾನೆ.
ತೀವ್ರ ಗಾಯಗೊಂಡ ಮದನನನ್ನು ಆನಂದಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸಮಯಪ್ರಜ್ಞೆಯನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.