ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ

IMG-20241030-WA0195
ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಅನುಮಾನಾಸ್ಪದಾಗಿ ಸಾವಿಗೀಡಾಗಿರುವ ಗೃಹಿಣಿಯ ಶವವನ್ನು ಪರಿಶೀಲಿಸುತ್ತಿರುವ ತಹಸಿಲ್ದಾರ್ ಜೆ ಮಂಜುನಾಥ್.
Published on

ಕೊಲೆ ಮಾಡಿದ್ದಾರೆಂದು ಮೃತಳ ಮನೆಯವರ ಆರೋಪ

ಹನಗೋಡು:ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಬುಧವಾರ ಗೃಹಿಣಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೂಡ್ಲೂರು ನಿವಾಸಿ ಅಂತೊಣಿ ಕಿರಣ್ ಅವರ ಪತ್ನಿ ನಿತ್ಯನಿರ್ಮಲಾ(25) ಮೃತ ಗೃಹಿಣಿ. ತುಮಕೂರು ಜಿಲ್ಲೆಯ ಸಣ್ಣೇನಹಳ್ಳಿ ತೆರೆಸಮ್ಮ ತಮ್ಮ ಮಗಳು ನಿತ್ಯ ನಿರ್ಮಲಾ ಅವರನ್ನು ಎರಡು ವರ್ಷಗಳ ಹಿಂದೆ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಅಂತೋಣಿಕಿರಣ್‌ಗೆ ಮದುವೆ ಮಾಡಿಕೊಟ್ಟಿದ್ದರು. ಇವರಿಗೆ ಒಂದು ವರ್ಷದ ಮಗು ಇದೆ. ಕೆಲವು ದಿನಗಳಿಂದ ಪತಿ ಅಂತೋಣಿ ಕಿರಣ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ 2-3 ಬಾರಿ ನ್ಯಾಯ ಪಂಚಾಯಿತಿಯೂ ನಡೆದಿತ್ತು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ತಾಯಿಯೊಂದಿಗೆ ತನ್ನ ಸಂಕಷ್ಟವನ್ನು ನಿರ್ಮಲಾ ಹೇಳಿಕೊಂಡಿದ್ದಳು. ಆದರೆ ತಾಯಿ ಅಸಹಾಯಕತೆಯಿಂದ ಮಗಳಿಗೆ ಸಮಾಧಾನ ಹೇಳುತ್ತಲೇ ಬಂದಿದ್ದರು.

ಮಂಗಳವಾರ ಬೆಳಗ್ಗೆ ನಿರ್ಮಲ ತನ್ನ ತಾಯಿಗೆ ಫೋನ್ ಮಾಡಿ ನನಗೆ ಹಣ ತರುವಂತೆ ಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಗಂಡ ಹಾಗೂ ಮನೆಯವರು ಹಲ್ಲೆ ನಡೆಸಿದ್ದಾರೆ. ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಸಂಜೆ ಮೇಲೆ ಬರುವುದಾಗಿ ಪಾಲಕರು ತಿಳಿಸಿದ್ದರು.

ನಿರ್ಮಲಾ

ಮಧ್ಯಾಹ್ನ ಮಗಳಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಗಾಬರಿಗೊಂಡು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಲಾಗಿ ಮಗಳ ಸಾವಿನ ಸುದ್ದಿ ತಿಳಿದಿದೆ. ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದಾಗ ಅಷ್ಟರಲ್ಲಾಗಲೇ ನಿರ್ಮಲಾ ಅವರ ಅಂತ್ಯಕ್ರಿಯೆಗೆ ತಯಾರಿ ಮಾಡಿಕೊಂಡಿದ್ದರು. ಈ ನಡುವೆ ಎರಡೂ ಮನೆಯವರ ನಡುವೆ ಗಲಾಟೆ ನಡೆದಿದೆ. ಶವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿರ್ಮಲಾ ಕುತ್ತಿಗೆ ಬಳಿ ಗಾಯವಾಗಿರುವುದು ಪತ್ತೆಯಾಗಿದ್ದು, ಅನುಮಾನಗೊಂಡ ತಾಯಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದು, ಮಾಹಿತಿ ನೀಡದೆ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ ಎಂದು ದೂರು ನೀಡಿದ ಮೇರೆಗೆ ಠಾಣೆಯ ಇನ್‌ಸ್ಪೆಕ್ಟರ್ ಎನ್.ಮುನಿಯಪ್ಪ, ತಹಸೀಲ್ದಾರ್ ಜೆ.ಮಂಜುನಾಥ್, ಡಿವೈಎಸ್‌ಪಿ ಗೋಪಾಲಕೃಷ್ಣ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಂತೋಣಿ ಕಿರಣ್ ಮತ್ತು ಆತನ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net