

ಶಿವಮೊಗ್ಗ: ಅಂತರಯಾನಕ್ಕಾಗಿ ದೇಹ ದೇವಾಲಯವಾಗಬೇಕು. ದೇವಾಲಯಗಳು ಬಹಿರ್ಮುಖದಿಂದ ಅಂತರ್ಮುಖಿ ಆಗಿಸುವ ಜಾಗೃತಿ ಕೇಂದ್ರಗಳು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಳೆಹನಸವಾಡಿ ಗ್ರಾಮದ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು ಕಲಶಾರೋಹಣ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದೇವಾಲಯಗಳು ಜನರನ್ನು ಒಟ್ಟಿಗೆ ಸೇರಿಸುವ ಸಾಂಸ್ಕೃತಿಕ ಕೇಂದ್ರಗಳು. ಇದು ಧರ್ಮ, ದಾನ, ಶಾಂತಿ ಮತ್ತು ಸಹಾನುಭೂತಿಯ ಕೇಂದ್ರ. ಅನ್ನದಾನ, ಶಿಕ್ಷಣ, ಸೇವಾ ಕರ್ಮಗಳ ಕೇಂದ್ರ ಎಂದರು.
ಹಲವಾರು ದೇವಾಲಯಗಳು ಕೇವಲ ಪೂಜಾ ಸ್ಥಳವಲ್ಲ. ಅವು ಸಮಾಜಕ್ಕೆ ಸೇವೆ ಸಲ್ಲಿಸುವ ಸಂಸ್ಥೆಗಳಾಗಿ ಪರಿವರ್ತನೆಯಾಗಿವೆ. ದೇವರ ಸೃಷ್ಟಿಯಲ್ಲಿ ಅತ್ಯಂತ ಅದ್ಭುತವಾದುದು ಮನುಷ್ಯ ದೇಹ. ಇದು ಕೇವಲ ಮಾಂಸದ ರೂಪವಲ್ಲ. ದೇಹದೊಳಗೆ ಆತ್ಮವಿರುವ ಕಾರಣದಿಂದ ಅದು ಚೇತನವಾಗಿರುತ್ತದೆ. ಆತ್ಮವೇ ಪರಮಾತ್ಮನ ಭಾಗ. ಇದು ಆತ್ಮನ ನಿವಾಸ, ಜ್ಞಾನ ಚೇತನ, ಪ್ರಾಣಶಕ್ತಿ ಹಾಗೂ ದೇವಸ್ಮರಣೆಗಾಗಿ ಯೋಗ್ಯವಾದ ಅವಯವಗಳ ಸಮೂಹ. ಆದ್ದರಿಂದ ದೇಹವೇ ನಿಜವಾದ ದೇವಾಲಯ. ದೇಹವನ್ನು ಪವಿತ್ರ, ಶುದ್ಧ, ಸಾತ್ವಿಕವಾಗಿ ಇಡುವುದು ಅವಶ್ಯ ಎಂದು ತಿಳಿಸಿದರು.
ದೇವರು ದೇಹವನ್ನು ದೇವಾಲಯವನ್ನಾಗಿ ನಿರ್ಮಿಸಿದನು. ಮಾನವನು ದೇವಾಲಯವನ್ನು ನಿರ್ಮಿಸಿದನು. ಒಂದು ಆಂತರಿಕ ಯಾತ್ರೆ, ಇನ್ನೊಂದು ಬಾಹ್ಯ ಯಾತ್ರೆ ಎರಡೂ ಅಗತ್ಯ. ಎರಡೂ ಪವಿತ್ರ. ದೇಹದೊಳಗಿನ ದೇವನನ್ನು ಅರಿಯುವುದು ತಪಸ್ಸು. ದೇವಾಲಯದಲ್ಲಿನ ದೇವನನ್ನು ನೆನೆಯುವುದು ಭಕ್ತಿ. ಎರಡೂ ದಾರಿಗಳು ಒಂದೇ ತಾಣವನ್ನು ತಲುಪುತ್ತವೆ ಎಂದು ಹೇಳಿದರು.
ಕುಂಬಾರ ಗುರುಪೀಠದ ಗುಂಡಯ್ಯ ಶ್ರೀಗಳು, ಬಂಜಾರ ಗುರುಪೀಠದ ಸೇವಾಲಾಲ್ ಶ್ರೀಗಳು, ಶಿಕಾರಿಪುರದ ಚನ್ನಬಸವ ಶ್ರೀಗಳು ಆಶೀರ್ವಚನ ನೀಡಿದರು. ಹೊಂಗಿರಣ ಲೋಕೇಶ ಅಧ್ಯಕ್ಷತೆ ವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ, ನಿಗಮದ ಮಾಜಿ ನಿರ್ದೇಶಕ ದೇವಿಕುಮಾರ, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ, ಉದ್ಯಮಿ ಹೊಳಲೂರು ಸಂತೋಷ್, ಬೂದಿಗೆರೆ ಬಸವರಾಜ ಮಾತನಾಡಿದರು.